ಕುವೆಂಪು ವಿವಿ ವಿರುದ್ಧ್ದ ಎನ್‌ಎಸ್‌ಯುಐ ಪ್ರತಿಭಟನೆ
ಶಿವಮೊಗ್ಗ, ಎ.13: ಪದವಿ ತರಗತಿಗಳ ಪರೀಕ್ಷಾ ಶುಲ್ಕದಲ್ಲಿ ಶೇ.15 ರಷ್ಟು ಹೆಚ್ಚಳಗೊಳಿಸಿರುವ ಕುವೆಂಪು ವಿಶ್ವವಿದ್ಯಾನಿಲಯದ ನಿರ್ಧಾರ ವಿರೋಧಿಸಿ ಬುಧವಾರ ಎನ್‌ಎಸ್‌ಯುಐ ಸಂಘಟನೆಯ ಕಾರ್ಯಕರ್ತರು, ನಗರದ ಎಂ.ಆರ್.ಎಸ್. ವೃತ್ತದ ಬಳಿಯಿರುವ ಕುವೆಂಪು ವಿವಿ ಆಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕುವೆಂಪು ವಿವಿ ಆಡಳಿತದ ಈ ದಿಢೀರ್ ನಿರ್ಧಾರದಿಂದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ವಿವಿಧ ಪದವಿಗಳಲ್ಲಿ ಅಭ್ಯಾಸ ಮಾಡುತ್ತಿರುವ ಸಾವಿರಾರು ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಏರಿಕೆ: 2014-15 ನೆಯ ಸಾಲಿನಲ್ಲಿ ಬಿಎ, ಬಿಎಸ್ಸಿ ,ಬಿಕಾಂ ಪದವಿ ವಿದ್ಯಾರ್ಥಿಗಳಿಗೆ 340 ರೂ. ಪರೀಕ್ಷಾ ಶುಲ್ಕ ಹಾಗೂ ಪ್ರಾಯೋಗಿಕ ಪರೀಕ್ಷೆಗೆ 70 ರೂ. ನಿಗದಿ ಮಾಡಲಾಗಿತ್ತು. ಬಿಬಿಎಂ, ಬಿಸಿಎ, ಬಿಎಸ್‌ಡಬ್ಲ್ಯೂ ವಿದ್ಯಾರ್ಥಿಗಳಿಗೆ 575 ರೂ. ಪರೀಕ್ಷಾ ಶುಲ್ಕ ಹಾಗೂ 125 ರೂ. ಅಂಕಪಟ್ಟಿ ಶುಲ್ಕ ನಿಗದಿಯಾಗಿತ್ತು. ಹಾಗೆಯೇ ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಂದ ಘಟಿಕೋತ್ಸವ ಪ್ರಮಾಣಪತ್ರ ನೀಡಲು ಸಾಮಾನ್ಯ ವರ್ಗದವರಿಂದ 450 ರೂ. ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಂದ 380 ರೂ.ಗಳನ್ನು ವಿ.ವಿ. ಆಡಳಿತ ಸಂಗ್ರಹಿಸುತ್ತಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಆದರೆ 2015-16ನೆ ಸಾಲಿನಲ್ಲಿ ಬಿಎ, ಬಿಎಸ್ಸಿ, ಬಿಕಾಂ ಪರೀಕ್ಷಾ ಶುಲ್ಕದಲ್ಲಿ 50 ರೂ. ಹಾಗೂ ಪ್ರಾಯೋಗಿಕ ಪರೀಕ್ಷೆಯ ಶುಲ್ಕದಲ್ಲಿ 10 ರೂ. ಏರಿಕೆ ಮಾಡಲಾಗಿದೆ. ಹಾಗೆಯೇ ಬಿಬಿಎಂ, ಬಿಸಿಎ, ಬಿಎಸ್‌ಡಬ್ಲ್ಯೂ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದಲ್ಲಿ 85, ಅಂಕಪಟ್ಟಿ ಶುಲ್ಕದ ಪ್ರಮಾಣದಲ್ಲಿ 20 ರೂ. ಹೆಚ್ಚಿಸಲಾಗಿದೆ. ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ಘಟಿಕೋತ್ಸವ ಪ್ರಮಾಣ ಪತ್ರದ ಶುಲ್ಕದಲ್ಲಿ ಸಾಮಾನ್ಯ ವರ್ಗದವರಿಗೆ 70 ರೂ. ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 60 ರೂ.ಗಳಷ್ಟು ಶುಲ್ಕ ಹೆಚ್ಚಿಸಲಾಗಿದೆ. ಅಂಚೆ ಕಚೇರಿಯಲ್ಲಿ ಈ ಶುಲ್ಕ ಪಾವತಿಸಬೇಕಿದ್ದು, ಪೋಸ್ಟಲ್ ವೆಚ್ಚವೆಂದು 30 ರೂ. ಸೇವಾ ಶುಲ್ಕ ಭರಿಸಬೇಕಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.15 ರಷ್ಟು ಹೆಚ್ಚುವರಿ ಶುಲ್ಕವನ್ನು ವಿದ್ಯಾರ್ಥಿಗಳು ಪಾವತಿಸಬೇಕಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಪ್ರತೀ ವಿದ್ಯಾರ್ಥಿಯಿಂದ 145 ರೂ. ಅಂಕಪಟ್ಟಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ, ಯಾವುದೇ ಒಂದು ವಿಷಯದಲ್ಲಿ ಅನುತ್ತೀರ್ಣನಾದರೂ ಆ ವಿದ್ಯಾರ್ಥಿಗೆ ನೀಡುವುದು ಅಂಕಪಟ್ಟಿಯ ನಕಲು ಪ್ರತಿ ಮಾತ್ರವಾಗಿದೆ. ವಿದ್ಯಾರ್ಥಿಯಿಂದ ಶುಲ್ಕ ಪಡೆದಿದ್ದರೂ ನಕಲು ಪ್ರತಿ ನೀಡಿ ವಂಚಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. ವಿ.ವಿ.ಸಂಗ್ರಹಿಸುತ್ತಿರುವ ಪರೀಕ್ಷಾ ಶುಲ್ಕ ಹೆಚ್ಚು ಕಡಿಮೆ ಪ್ರವೇಶ ಶುಲ್ಕದಷ್ಟೇ ಆಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗುತ್ತದೆ. ಪ್ರತೀ 5 ಅಥವಾ 10 ವರ್ಷಗಳಿಗೊಮ್ಮೆ ಶುಲ್ಕ ಹೆಚ್ಚಳ ಮಾಡಬೇಕು. ಪ್ರಸ್ತುತ ಏರಿಕೆ ಮಾಡಿರುವ ಪರೀಕ್ಷಾ ಶುಲ್ಕ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ರಾಜ್ಯ ಮುಖಂಡ ಸಿ.ಜೆ.ಮಧುಸೂದನ್, ಕೆ.ಚೇತನ್, ಜಿಲ್ಲಾಧ್ಯಕ್ಷರಾದ ಶ್ರೀಜಿತ್, ನಗರಾಧ್ಯಕ್ಷ ಬಾಲಾಜಿ, ವಿನಯ್, ದರ್ಶನ್, ಶರತ್ ಮತ್ತಿತರರಿದ್ದರು.