ಮಲೆನಾಡಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ತೀರ್ಥಹಳ್ಳಿ, ಎ. 13: ಮಲೆನಾಡಿನ ಇತಿಹಾಸದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ ಬಂದೊದಗಿದ್ದು, ಮಲೆನಾಡಿಗರು ಆತಂಕದ ಕ್ಷಣಗಳನ್ನು ಎದುರು ನೋಡುತ್ತಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಇಲ್ಲಿನ ಜೀವನದಿ ತುಂಗೆ ಬತ್ತಿಹೋಗುವ ಹಂತಕ್ಕೆ ತಲುಪಿತ್ತು. ಅದಾದ ನಂತರ ಇದೀಗ ತುಂಗೆ ಬತ್ತುವ ಹಂತ ತಲುಪಿ ಝರಿಯಂತೆ ಹರಿಯುವಂತಾಗಿದೆ.
ಕಳೆದ ವರ್ಷ ಎಪ್ರಿಲ್ ಮೊದಲ ವಾರ ಹಾಗೂ ಮೇ ತಿಂಗಳಲ್ಲಿ ಮಳೆರಾಯನ ಆಗಮನದಿಂದ ಮಲೆನಾಡಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಕಳೆದ ಒಂದು ತಿಂಗಳಿನಿಂದ ತಾಲೂಕಿನ ಮಂಡಗದ್ದೆ ಹೋಬಳಿಯಲ್ಲಿ ಹಾಗೂ ಕಿತ್ತೂರು ಹೋಬಳಿಯ ಕೆಲವೆಡೆ ಮಾತ್ರ ಮಳೆ ಬಿದ್ದಿದ್ದು, ಉಳಿದ ಪ್ರದೇಶಗಳಲ್ಲಿ ಬರದ ಛಾಯೆ ಗೋಚರವಾಗಿದೆ.
ಭಾರತದಲ್ಲಿಯೇ ಎರಡನೆ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ದಕ್ಷಿಣ ಭಾರತದ ಚಿರಾಪುಂಜಿ ಎಂಬ ಹೆಗ್ಗಳಿಕೆಯ ಆಗುಂಬೆ ಸೆರಗಿನ ಹಳ್ಳಿಗಳಲ್ಲಿಯೂ ನೀರಿನ ಬರ ಮುಗಿಲು ಮುಟ್ಟಿದ್ದು, ಕಂಗೆಟ್ಟ ಜನಜಾನುವಾರು ದಿಕ್ಕು ತೋಚದೆ ಕುಳಿತಿದ್ದಾರೆ. ಇಲ್ಲಿನ ಪ್ರಮುಖ ಮಾಲತಿ ನದಿಯಲ್ಲೂ ನೀರಿನ ಪ್ರಮಾಣ ಬತ್ತಿಹೋಗಿದ್ದು, ಜಾನುವಾರುಗಳಿಗೂ ಕುಡಿಯಲು ನೀರಿಲ್ಲದಂತಾಗಿದೆ.
ವಾಸ್ತವವಾಗಿ ನಿತ್ಯ ಹರಿದ್ವರ್ಣ ಕಾಡಿನಿಂದ ಕೂಡಿರುವ ಈ ಪ್ರದೇಶಗಳಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ಸಮೃದ್ಧವಾಗಿ ನೀರು ಹರಿಯದಿದ್ದರೂ ಕಡೇಪಕ್ಷ ಕ್ಷೀಣವಾಗಿಯಾದರೂ ಹಳ್ಳಕೊಳ್ಳಗಳಲ್ಲಿ ಹಾಗೂ ಊರೊಳಗಿನ ಬಾವಿಗಳಲ್ಲಿ ಕುಡಿಯುವ ಮಟ್ಟಿಗಾದರೂ ನೀರಿರುತ್ತಿತ್ತು. ಆದರೆ, ಈ ಬಾರಿ ಬಿರುಬೇಸಿಗೆಯಿಂದ ಹಳ್ಳ ಕೊಳ್ಳಗಳು ತಿಂಗಳಿಗೂ ಮೊದಲೇ ಒಣಗಿದ್ದರೆ ಬಾವಿಗಳು ಕೂಡ ಈಗ ಒಣಗಿದ್ದು, ಕಂಗೆಟ್ಟ ಗ್ರಾಮಸ್ಥರು ತಮ್ಮ ಜಮೀನುಗಳ ಜೌಗು ಪ್ರದೇಶದಲ್ಲಿ ನೀರಿಗಾಗಿ ತಾವೇ ಸ್ವತಃ ಚಿಕ್ಕಪುಟ್ಟ ಬಾವಿಗಳನ್ನು ತೋಡುವ ದುಃಸ್ಥಿತಿಗೆ ತಲುಪಿದ್ದಾರೆ.
ತಾಲೂಕಿನ ಕೋಣಂದೂರಿನ ಸುತ್ತಮುತ್ತ ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದ್ದು, ಈ ಭಾಗದ ಕೆಲವು ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಿಂದ ತಮ್ಮ ಜಮೀನುಗಳಲ್ಲಿ ಬಾವಿ ತೆಗೆಸುವ ಕಾರ್ಯದಲ್ಲಿ ಮುಂದಾಗಿದ್ದಾರೆ. ಅಂತರ್ಜಲ ಪ್ರಮಾಣ ಕಡಿಮೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಬೋರ್‌ವೆಲ್‌ಗಳೂ ಸಹ ಉಪಯೋಗಕ್ಕೆ ಬಾರದಂತಾಗಿದೆ.
ಜಿಲ್ಲಾಡಳಿತ ನೀರು ಪೂರೈಕೆಗೆ ತಾಲೂಕು ಆಡಳಿತಕ್ಕೆ ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿ ಜನರ ಬೇಡಿಕೆಗೆ ಸ್ಪಂದಿಸುವಂತೆ ಸೂಚನೆ ನೀಡಿದ್ದರೂ ಸಹ ತಾಲೂಕಿನ ಎಷ್ಟೋ ಕಡೆ ಅಧಿಕಾರಿ ವರ್ಗ ಪೂರಕವಾಗಿ ಸ್ಪಂದಿಸುತ್ತಿಲ್ಲವೆಂಬ ದೂರು ವ್ಯಾಪಕವಾಗಿ ಕೇಳಿಬಂದಿದೆ.