×
Ad

ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ: ಶ್ರೀನಿವಾಸ್

Update: 2016-04-13 22:08 IST

ಸಾಗರ, ಎ. 13: ನಗರವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಪೈಪ್‌ಲೈನ್ ಅಳವಡಿಕೆ ಮಾಡುವಂತೆ ಅನೇಕ ಬಾರಿ ಸಾಮಾನ್ಯಸಭೆಯಲ್ಲಿ ಹೇಳಿದ್ದರೂ ಈತನಕ ಕಾರ್ಯರೂಪಕ್ಕೆ ಬಂದಿಲ್ಲ. ನೀರನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡಲಾಗುತ್ತಿದ್ದು, ನೀರಿನ ಅಪಮೌಲ್ಯ ತಡೆಯಬೇಕಾದರೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಬೇಕು ಎಂದು ನಗರಸಭೆ ಸದಸ್ಯ ತೀ.ನ.ಶ್ರೀನಿವಾಸ್ ಆಗ್ರಹಿಸಿದ್ದಾರೆ.

ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ನಡೆದ ನಗರಸಭೆ ವಿಶೇಷ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೆ ಮೀಟರ್ ಅಳವಡಿಕೆ ಕುರಿತು ಆದೇಶ ಬಂದಿದ್ದರೂ ಈತನಕ ಅದು ಅನುಷ್ಠಾನಕ್ಕೆ ಬಂದಿಲ್ಲ. ತೀರ್ಥಹಳ್ಳಿ ನಗರವ್ಯಾಪ್ತಿಯಲ್ಲಿ ಶೇ. 100ರಷ್ಟು ಮೀಟರ್ ಅಳವಡಿಕೆ ಮಾಡಲಾಗಿದ್ದು, ನಮ್ಮಲ್ಲಿ ಏಕೆ ಅನುಷ್ಠಾನಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಪ್ರತಿವರ್ಷ ನೀರು ಸರಬರಾಜು ಮಾಡಲು ಸುಮಾರು 2 ಕೋಟಿ ರೂ. ನಗರಸಭೆಯಿಂದ ವ್ಯಯಿಸಲಾಗುತ್ತಿದೆ. ಆದರೆ ಕೇವಲ 50 ಲಕ್ಷ ರೂ. ಮಾತ್ರ ಆದಾಯ ಬರುತ್ತಿದೆ. ಕಡ್ಡಾಯ ಮೀಟರ್ ಅಳವಡಿಕೆಯಿಂದ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಆಡಳಿತ ಪ್ರಯತ್ನ ನಡೆಸಬೇಕು ಎಂದು ಹೇಳಿದರು. ವಿಪಕ್ಷ ನಾಯಕ ಸಂತೋಷ್ ಆರ್.ಶೇಟ್ ಮಾತನಾಡಿ, ಪ್ರತಿಬಾರಿ ಸಾಮಾನ್ಯಸಭೆಯಲ್ಲಿ ಕ್ರಿಯಾಯೋಜನೆ ತಯಾರಿಸಲಾಗುತ್ತದೆ. ಆದರೆ ಪಟ್ಟಿ ಮಾಡುವ ಸಂದರ್ಭದಲ್ಲಿ ಸಭೆಯಲ್ಲಿ ಆಯ್ಕೆ ಮಾಡಿದ ಕಾಮಗಾರಿ ಕ್ರಿಯಾಯೋಜನಾ ಪಟ್ಟಿಯಲ್ಲಿ ಇರುವುದಿಲ್ಲ. ನಗರ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿಯಿಂದ ಬಹುತೇಕ ರಸ್ತೆಗಳು ಹಾಳಾಗಿದೆ. ಜನ ಸಂಚಾರ ಇರುವ ಮುಖ್ಯರಸ್ತೆಗಳಿಗೆ ಡಾಂಬರೀಕರಣ ನಡೆಸುವತ್ತ ಮೊದಲ ಆದ್ಯತೆ ನೀಡಬೇಕು. ಪಟ್ಟಿ ತಯಾರಿಸುವಾಗ ವಿಪಕ್ಷದವರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಸದಸ್ಯ ಶ್ರೀನಿವಾಸ್ ಮೇಸ್ತಿ, ನಾಗರತ್ನಾ ಸಿ. ಮತ್ತು ಅರವಿಂದ್ ಮಾತನಾಡಿ, ನಗರಸಭೆ ಸಾಮಾನ್ಯಸಭೆಗೆ ಬಂದು ಕಾಫಿ ಕುಡಿದು, ತಿಂಡಿ ತಿಂದು ಹೋಗುವುದಾದರೆ ಅಂತಹ ಸಭೆಯ ಅಗತ್ಯವಿಲ್ಲ. ಸಭೆಯಲ್ಲಿ ಚರ್ಚಿಸುವ ವಿಷಯವನ್ನು ಅನುಷ್ಟಾನಕ್ಕೆ ತರುವ ನಿಟ್ಟಿನಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷ ಆರ್.ಗಣಾಧೀಶ್ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾರ್ಡ್‌ವ್ಯಾಪ್ತಿಯಲ್ಲಿ ಅಗತ್ಯ ಇರುವ ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಿ ಪೂರೈಸಲಾಗುವುದು. 177.45 ಲಕ್ಷ ರೂ. ಕಾಮಗಾರಿಯನ್ನು ಎಲ್ಲ ವಾರ್ಡ್‌ಗೆ ಸಮಾನವಾಗಿ ಹಂಚಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಐ.ಎನ್.ಸುರೇಶಬಾಬು, ಪೌರಾಯುಕ್ತ ಬಿ.ಎನ್.ಚಂದ್ರಶೇಖರ್ ಹಾಗೂ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News