ಅಕ್ರಮ ಮರಳು ಸಾಗಾಟದ ವಿರುದ್ಧ ಪ್ರತಿಭಟನೆ
ಮೂಡಿಗೆರೆ, ಎ.13: ಸರ ಕಾರಿ ರಜಾ ದಿನದಂದು ಅಂಗಡಿ ಗ್ರಾಮದಿಂದ ಅಕ್ರಮ ಮರಳು ಸಾಗಾಟದ ಶಂಕೆಯಿಂದ ಲಾರಿಗಳನ್ನು ತಡೆದು ಪೊಲೀಸರ ವಶಕ್ಕೆ ನೀಡಿ ಪ್ರಕರಣ ದಾಖಲಿಸಲು ದೂರು ನೀಡಿದ್ದರೂ ಪ್ರಯೋ ಜನವಾಗದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ತಹಶೀ ಲ್ದಾರರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮರಳು ಬಳಕೆದಾರರ ಸಂಘದ ಅಧ್ಯಕ್ಷ ಚಂದ್ರೇಶ್ ಮಾತನಾಡಿ, ಎ. 9ರಂದು ಸರಕಾರ ರಜೆ ದಿನದಂದು ಎಂಟು ಲಾರಿಗಳು ಅಂಗಡಿ ಗ್ರಾಮದಿಂದ ಮರಳು ತುಂಬಿಸಿ ಹೋಗುತ್ತಿದ್ದವು. ಅದನ್ನು ಗಮನಿಸಿದ ಕೆಲವು ಸಂಘಟನೆಗಳು ವಿಚಾರಿಸಿದಾಗ ಮರಳು ಸಾಗಾಟಕ್ಕೆ ಗೋಣಿಬೀಡು ಪೊಲೀಸರ ಸೀಲು ಹಾಗೂ ಸಹಿ ಹಾಕಿರುವ ಕೈಬರಹದ ಚೀಟಿ ಮೂಲಕ ಮರಳು ಸಾಗಿಸುತ್ತಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ದಿಢೀರ್ ಪ್ರತಿಭಟನೆ ನಡೆಸಿ ದೂರು ನೀಡಲಾಗಿತ್ತು. ಆದರೆ ಈವರೆಗೂ ಪೊಲೀಸರು ಕ್ರಮ ಜರಗಿಸಿಲ್ಲ ಎಂದು ದೂರಿದರು.
ನಂತರ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಮಾತನಾಡಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಬಳಿಕ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ ಹಾಗೂ ತಹಶೀಲ್ದಾರ್ ಪದ್ಮನಾಭ್‌ಶಾಸ್ತ್ರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರ ಮನವೊಲಿಕೆಗೆ ಪ್ರಯತ್ನಿಸಿದರು.
ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ದೇವವೃಂದ ರವಿ, ರೈತ ಸಂಘದ ರಾಜ್ಯ ಸದಸ್ಯ ಲಕ್ಷ್ಮಣ್‌ಗೌಡ, ರೈತ ಸಂಘದ ಉಪಾಧ್ಯಕ್ಷ ಹಳೆಕೆರೆ ರಘು, ಪುಟ್ಟಸ್ವಾಮಿಗೌಡ, ಜೈ ಕರ್ನಾಟಕ ಸಂಘದ ಅಧ್ಯಕ್ಷ ಕಡದಾಳ್ ಸುಧೀರ್, ಬಿ.ಕೆ.ಗಿರಿಶ್, ಪ್ರಶಾಂತ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.