×
Ad

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಮೂವರ ಬಂಧನ

Update: 2016-04-13 23:15 IST

ಬೆಂಗಳೂರು, ಎ. 13: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿರುವ ಸಿಐಡಿ ಅಧಿಕಾರಿಗಳು, ತಮ್ಮ ಪುತ್ರರ ಹಿತಕ್ಕಾಗಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಮೂವರು ಆರೋಪಿಗಳನ್ನು ಸಿಐಡಿ ಬಂಧಿಸಿದೆ.
ಬಂಧಿತರನ್ನು ನಗರದ ಕೆ.ಆರ್.ವೃತ್ತದಲ್ಲಿ ರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಹುದ್ದೆಯಲ್ಲಿರುವ ರಾಜರಾಜೇಶ್ವರಿ ನಗರದ ನಿವಾಸಿ ಕೆ.ಎಸ್. ರಂಗನಾಥ್(50), ಉಲ್ಲಾಳು ಲೇಔಟ್‌ನ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಬಿ.ಅನಿಲ್ ಕುಮಾರ್(46) ಹಾಗೂ ಕೋಚಿಂಗ್ ಸೆಂಟರ್ ಮಾಲಕ ಜಾಲಹಳ್ಳಿಯ ಕೆ.ಎಂ. ಮುರಳೀಧರ್ ಎಂದು ಸಿಐಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
 ರಸಾಯನಿಕಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪದ ಮೇಲೆ ಈ ಮೂವರನ್ನು ಬಂಧಿಸಲಾಗಿದ್ದು, ಆರೋಪಿಗಳು ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್‌ಪಿನ್ ಶಿವಕುಮಾರಸ್ವಾಮಿ ಜೊತೆ ನಿಕಟ ಸಂಪರ್ಕ ಹೊಂದಿದ್ದಲ್ಲದೆ, ರಾಜ್ಯವಾಪ್ತಿ ಸೋರಿಕೆ ಯಾದ ಪ್ರಶ್ನೆಪತ್ರಿಕೆಯನ್ನು ಪ್ರಸಾರ ಮಾಡುತ್ತಿದ್ದರು ಎನ್ನಲಾಗಿದೆ.
ಕೆ.ಎಸ್.ರಂಗನಾಥ್‌ರ ಪುತ್ರ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಹಿನ್ನೆಲೆಯಲ್ಲಿ ಕಿಂಗ್‌ಪಿನ್ ಶಿವಕುಮಾರ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪಿಗಳಾದ ರುದ್ರಪ್ಪ ಮತ್ತು ಕುಮಾರಸ್ವಾಮಿ ಯಾನೆ ಕಿರಣ್‌ನನ್ನು ಭೇಟಿಯಾಗಿ ಕಾನೂನು ಬಾಹಿರವಾಗಿ ಪ್ರಶ್ನೆಪತ್ರಿಕೆ ಪಡೆಯುವ ಜೊತೆಗೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದರು ಎಂದು ಹೇಳಲಾಗಿದೆ.
ಅದೇ ರೀತಿ, ಬಿ.ಅನಿಲ್‌ಕುಮಾರ್ ಎಂಬಾತ ಕಾನೂನು ಬಾಹಿರವಾಗಿ ಪ್ರಶ್ನೆಪತ್ರಿಕೆಗಳನ್ನು ಕಿಂಗ್‌ಪಿನ್ ಶಿವಕುಮಾರ್ ಸ್ವಾಮಿಯಿಂದ ಪಡೆದು ತನ್ನ ಮಗನಿಗೆ ನೀಡುವ ಜೊತೆಗೆ ಮನೆಗೆ ಇತರೆ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಪ್ರಶ್ನೆಪತ್ರಿಕೆ ನೀಡಿ ಹಣ ಪಡೆದಿದ್ದಾನೆ ಎಂದು ಸಿಐಡಿ ಮೂಲಗಳು ಹೇಳಿವೆ.
ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಯಲ್ಲಿ ಟ್ಯುಟೋರಿಯಲ್ಸ್ ಮಾಲಕ ಕೆ.ಎಂ.ಮುರಳೀಧರ್, ಕಿಂಗ್‌ಪಿನ್ ಶಿವಕುಮಾರಸ್ವಾಮಿಗೆ ಸಹಕರಿಸಿದ್ದು, ಪ್ರಶ್ನೆ ಪತ್ರಿಕೆ ತಂದು, ಅದನ್ನು ಬಗೆಹರಿಸಿ ಬಳಿಕ ಉತ್ತರ ಸಮೇತ ಮಾರಾಟ ಮಾಡುತ್ತಿದ್ದರು ಎಂದು ಸಿಐಡಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವರೊಬ್ಬರ ವಿಶೇಷ ಅಧಿಕಾರಿ ಓಬಳರಾಜು ಸೇರಿ ಇದುವರೆಗೆ ಎಂಟು ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಶಿವಕುಮಾರಸ್ವಾಮಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ಎಡಿಜಿಪಿಯಿಂದ ವಿಚಾರಣೆ:    ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿಯವರೇ ವಿಚಾರಣೆ ಮಾಡಿದ್ದು, ತುಮಕೂರಿನ ಕ್ಯಾತಸಂದ್ರ ಠಾಣೆ ಇನ್ಸಪೆಕ್ಟರ್ ರವಿಕುಮಾರ್ ಮತ್ತು ಅದೇ ಸಮಯದಲ್ಲಿ ತುಮಕೂರು ನಗರದಲ್ಲಿದ್ದ ಇನ್ಸ್‌ಪೆಕ್ಟರ್ ಹಾಗೂ ಇದೀಗ ಎಸ್‌ಐಟಿಯಲ್ಲಿ ಡಿವೈಎಸ್‌ಪಿ ಹುದ್ದೆಯಲ್ಲಿರುವ ಅಬ್ದುಲ್ ಖಾದರ್ ಎಂಬುವರನ್ನು ವಿಚಾರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
 ಪ್ರಕರಣದ ಕುರಿತು ಸಿಐಡಿಗೆ ಲಭ್ಯವಾಗಿರುವ ಮಾಹಿತಿಯಂತೆ 2013ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕ್ಯಾತಸಂದ್ರ ಇನ್ಸಪೆಕ್ಟರ್ ರವಿಕುಮಾರ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೆಪಿ ಆ್ಯಕ್ಟ್ ನಲ್ಲಿ ದೂರುದಾರರಾಗಿದ್ದರು ಎನ್ನಲಾಗಿದೆ.
ಆರೋಪಿಗಳ ಬಿಡುಗಡೆಗೆ ಒತ್ತಾಯ:   2013ರಲ್ಲಿ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಶಿವಕುಮಾರಸ್ವಾಮಿಯನ್ನು ಬಂಧಿಸಿದಾಗ ಆತ ತನ್ನ 17 ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ನೀಡಿದ್ದನಂತೆ. ಆದರೆ, ಪ್ರಕರಣದ ಐಒ ಆಗಿದ್ದ ಅಬ್ದುಲ್ ಖಾದರ್ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಲು ಹೋದಾಗ ಎಸ್‌ಪಿ ಹಾಗೂ ಡಿವೈಎಸ್‌ಪಿ ಮಟ್ಟದ ಅಧಿಕಾರಿಗಳು ಶಿವಕುಮಾರಸ್ವಾಮಿಯನ್ನು ಬಿಡುವಂತೆ ಒತ್ತಾಯಿಸಿದ್ದರು ಎಂಬ ಸ್ಫೋಟಕ ಮಾಹಿತಿ ತಿಳಿದು ಬಂದಿದೆ.

ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ
ಸೋರಿಕೆದಾರರ ವಿರುದ್ಧ ‘ಕೋಕಾ’
ಬೆಂಗಳೂರು, ಎ. 13: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳು ಬಂಧಿಸಿರುವ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಕೋಕಾ)ದಾಖಲಿಸಲಾಗಿದೆ.
ಏನಿದು ಕೋಕಾ?:  ಉಗ್ರವಾದ ಹಾಗೂ ಸಮಾಜದಲ್ಲಿ ಶಾಂತಿ ಕೆದಡುವ ಚಟುವಟಿಕೆಗಳಲ್ಲಿ ಪಾಲುದಾರಿಕೆ ಪಡೆಯುವ ಆರೋಪಿಗಳ ವಿರುದ್ಧ ಈ ಕಾಯ್ದೆ ಬಳಕೆ ಮಾಡಲಾಗುತಿತ್ತು. ಆದರೆ, ಇದೇ ಮೊದಲ ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಿಗಳ ಮೇಲೆ ಕೋಕಾ ಕಾಯ್ದೆ ಬಳಕೆ ಮಾಡಲಾಗಿದೆ. ಅಲ್ಲದೆ, ಈಗಾಗಲೇ ಬಂಧನದಲ್ಲಿರುವ ಆರೋಪಿಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ -31,32 ಹಾಗೂ ಐಪಿಸಿ ಸೆಕ್ಷನ್ 420, 381 ಬಳಸಲಾಗಿದೆ ಎಂದು ತಿಳಿದುಬಂದಿದೆ.
ಕೋಕಾ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಿಕೊಂಡರೆ ಒಂದು ವರ್ಷ ಜಾಮೀನು ಸಿಗುವ ಸಾಧ್ಯತೆಗಳಿಲ್ಲ. ಅದೇ ರೀತಿ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದರೆ ಜೀವಾವಧಿ ಶಿಕ್ಷೆ ವಿಧಿಸುವಂತೆ ದೋಷಾರೋಪ ಪಟ್ಟಿಯಲ್ಲಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಶಿಫಾರಸು ಮಾಡಬಹುದಾಗಿದೆ. ಸೋರಿಕೆ ಪ್ರಕರಣ ಮುರುಕಳಿಸಬಾರದೆಂದು ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News