×
Ad

ಪುತ್ರನ ಸಹಭಾಗಿತ್ವದ ಸಂಸ್ಥೆಗೆ ಸರಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಆರಂಭಕ್ಕೆ ಅವಕಾಶ

Update: 2016-04-13 23:23 IST

ಬೆಂಗಳೂರು, ಎ.13: ಸರಕಾರಿ ಆಸ್ಪತ್ರೆ ಆವರಣದಲ್ಲಿ ತನ್ನ ಪುತ್ರನ ಮಾಲಕತ್ವದ ಸಂಸ್ಥೆಗೆ ಖಾಸಗಿ ಲ್ಯಾಬ್ ಆರಂಭಕ್ಕೆ ಅವಕಾಶ ಕಲ್ಪಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.
ರಾಜ್ಯ ಸರಕಾರದ ಅಧೀನದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಮುಖ್ಯಮಂತ್ರಿಯವರ ಕಿರಿಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಜಂಟಿ ಮಾಲಕತ್ವದ ಕಂಪೆನಿಯೊಂದು ಸೂಪರ್ ಸ್ಪೆಷಾಲಿಟಿ ಲ್ಯಾಬ್ ಮತ್ತು ಡಯಾಗ್ನಸ್ಟಿಕ್ ಕೇಂದ್ರ ತೆರೆಯಲು ಮುಂದಾಗಿದೆ. ಸರಕಾರದ ಕ್ಯಾಬಿನೆಟ್ ಸೇವೆಗಳ ನೀತಿ ಸಂಹಿತೆ ಅನ್ವಯ ಸರಕಾರದ ಕ್ಯಾಬಿನೆಟ್ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರು ಸರಕಾರಿ ಉದ್ಯಮದ ಯಾವುದೆ ಕಾರ್ಯದಲ್ಲಿ ಭಾಗಿಯಾಗಬಾರದು. ಸರಕಾರಕ್ಕೆ ಯಾವುದೆ ಸೇವೆ ಒದಗಿಸುವಂತಿಲ್ಲ. ಆದರೂ, ಸರಕಾರಿ ಆಸ್ಪತ್ರೆಯ ಸೇವೆಗೆ ಸಿದ್ದರಾಮಯ್ಯ ಪುತ್ರನ ಮಾಲಕತ್ವದ ಸಂಸ್ಥೆ ಮುಂದಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. 2009ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಡಾ.ಸಿ.ಎಂ.ರಾಜೇಶ್‌ಗೌಡ ಎಂಬವರ ಜಂಟಿ ಮಾಲಕತ್ವದ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪೆನಿ ಬೆಂಗಳೂರು ಕಂಪೆನಿಗಳ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿದೆ.
ಪಾರದರ್ಶಕ ಟೆಂಡರ್: ರಾಜ್ಯ ಸರಕಾರ ಆಹ್ವಾನಿಸಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ನಮ್ಮ ಸಂಸ್ಥೆಯೂ ಸೇರಿದಂತೆ ಮೂರು ಕಂಪೆನಿಗಳು ಭಾಗವಹಿಸಿದ್ದವು. ಅದರಲ್ಲಿ ಒಂದು ಕಂಪೆನಿ ಅರ್ಹತೆ ಹೊಂದಿರಲಿಲ್ಲ. ಅತ್ಯಂತ ಕಡಿಮೆ ಬಿಡ್ಡುದಾರರಾದ ನಮಗೆ 2016ರ ಜನವರಿಯಲ್ಲಿ ಟೆಂಡರ್ ದೊರೆಯಿತು ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದ್ದಾರೆ. ಮುಖ್ಯಮಂತ್ರಿಯ ಪುತ್ರನಾದ ಕಾರಣಕ್ಕೆ ರಾಜ್ಯ ಸರಕಾರದ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದೆಂಬ ನಿಯಮವೇನು ಇಲ್ಲ. ನಮ್ಮ ತಂದೆ ಮುಖ್ಯಮಂತ್ರಿ ಯಾಗುವುದಕ್ಕಿಂತ ಮೊದಲೆ ಈ ಸಂಸ್ಥೆಯನ್ನು ಆರಂಭಿಸಲಾಗಿತ್ತು ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನಿಯಮ ಉಲ್ಲಂಘನೆ ಆಗಿಲ್ಲ: ಸಿದ್ದರಾಮಯ್ಯ
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಆರಂಭವಾಗಲಿರುವ ಸೂಪರ್ ಸ್ಪೆಷಾಲಿಟಿ ಡಯಾಗ್ನಸ್ಟಿಕ್ ಕೇಂದ್ರಕ್ಕೆ ಸಂಬಂಧಿಸಿದಂತೆ ತನ್ನ ಪುತ್ರನ ಕಂಪೆನಿಯಿಂದ ಯಾವುದೆ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪುತ್ರ ಡಾ.ಯತೀಂದ್ರ ಮಾಲಕತ್ವದ(ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್) ಕಂಪೆನಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಡವರ ಸೇವೆಗಾಗಿ ಡಯಾಗ್ನಸ್ಟಿಕ್ ಕೇಂದ್ರ ಆರಂಭಿಸಿದೆ ಎಂದರು.
ಆತ ಬಹಳ ವರ್ಷಗಳಿಂದ ಈ ವೃತ್ತಿಯಲ್ಲಿದ್ದು, ನಾನು ಮುಖ್ಯಮಂತ್ರಿಯಾದ ನಂತರ ಆರಂಭವಾದ ಸಂಸ್ಥೆ ಏನಲ್ಲ. ಡಯಾಗ್ನಸ್ಟಿಕ್ ಕೇಂದ್ರ ಆರಂಭಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಆತ ಭಾಗವಹಿಸಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ಒಪ್ಪಂದಕ್ಕೆ ಸಹಿ ಹಾಕಿದ ನಂತರ ನಿನ್ನೆ(ಮಂಗಳವಾರ) ಆತ ನನಗೆ ಈ ವಿಚಾರವನ್ನು ತಿಳಿಸಿದ ಎಂದು ಸಿದ್ದರಾಮಯ್ಯ ಹೇಳಿದರು.
ಪಾರದರ್ಶಕವಾಗಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ನನ್ನ ಮಗ ಪಾಲ್ಗೊಂಡಿದ್ದಾನೆ. ಇದರಿಂದ ಯಾವುದೆ ನಿಯಮಗಳು ಉಲ್ಲಂಘನೆಯಾಗಿಲ್ಲ. ನಾನು ಮುಖ್ಯಮಂತ್ರಿ ಎಂಬ ಕಾರಣಕ್ಕೆ ನನ್ನ ಮಗ ತನ್ನ ವೃತ್ತಿಯನ್ನು ಬಿಟ್ಟುಬಿಡಬೇಕೆ ಎಂದು ಅವರು ಪ್ರಶ್ನಿಸಿದರು.

ಡಾ.ಯತೀಂದ್ರ ರಾಜೀನಾಮೆ?
ಸರಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ಖಾಸಗಿ ಕಂಪೆನಿಯ ಲ್ಯಾಬ್ ಆರಂಭ ಮಾಡಲು ಅವಕಾಶ ಕಲ್ಪಿಸಿದ್ದು, ವಿವಾದಕ್ಕೆ ಎಡೆಮಾಡಿಕೊಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿ ಬರುತ್ತಿರುವ ಅಧಿಕಾರ ದುರ್ಬಳಕೆ ಆರೋಪದಿಂದ ಬೇಸತ್ತು ಅವರ ಪುತ್ರ ಡಾ.ಯತೀಂದ್ರ ಮ್ಯಾಟ್ರಿಕ್ಸ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಶಿಷ್ಟಾಚಾರ ಉಲ್ಲಂಘಿಸಿಲ್ಲ
ಬಡರೋಗಿಗಳಿಗೆ ಇತರ ಆಸ್ಪತ್ರೆ ಗಳಿಗಿಂತ ಶೇ.20ರಷ್ಟು ಕಡಿಮೆ ದರದಲ್ಲಿ ಆರೋಗ್ಯ ಸೌಲಭ್ಯ ಕಲ್ಪಿಸಲು ಮ್ಯಾಟ್ರಿಕ್ಸ್ ಸಂಸ್ಥೆ ಒಪ್ಪಿಕೊಂಡಿದೆ. ಟೆಂಡರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆದಿದ್ದು, ಯಾವುದೇ ಲೋಪದೋಷವಾಗಿಲ್ಲ. ಶಿಷ್ಟಾಚಾರವು ಉಲ್ಲಂಘನೆಯಾಗಿಲ್ಲ. ಟೆಂಡರ್ ಅನ್ನು ರದ್ದುಪಡಿಸುವ ಯೋಚನೆಯೂ ನಮ್ಮ ಮುಂದಿಲ್ಲ’
-ಡಾ.ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News