ಬಾಲಕಿ ಗರ್ಭಪಾತಕ್ಕೆ ಹೈಕೋರ್ಟ್ ನಿರಾಕರಣೆ
ಬೆಂಗಳೂರು, ಎ.13: ಹದಿನೈದು ವರ್ಷದ ಬಾಲಕಿ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದು, ಅವಳಿಗೆ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂಬ ಮನವಿಯನ್ನು ಹೈಕೋರ್ಟ್ ನಿರಾಕರಿಸಿದೆ.
ತನ್ನ ಮಗಳಿಗೆ ಗರ್ಭಪಾತ ಮಾಡಿಸಲು ವೈದ್ಯರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿ ಸಂತ್ರಸ್ತ ಬಾಲಕಿಯ ತಾಯಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಲೇವಾರಿ ಮಾಡಿದೆ.
22 ವಾರಗಳ ಗರ್ಭಿಣಿ ಬಾಲಕಿಗೆ ಈ ಹಂತದಲ್ಲಿ ಗರ್ಭಪಾತ ಮಾಡಬಹುದೇ ಎಂಬ ಬಗ್ಗೆ ತಜ್ಞ ವೈದ್ಯರು ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಇದೇ ನ್ಯಾಯಪೀಠವು ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯರಿಗೆ ಈ ಮುನ್ನ ನಿರ್ದೇಶಿಸಿತ್ತು. ಆದರೆ ತಜ್ಞ ವೈದ್ಯರು ಗರ್ಭಪಾತ ಸಲ್ಲದು ಎಂದು ಹೇಳಿದ್ದರು. ತದನಂತರ ನ್ಯಾಯಪೀಠವು ವಾಣಿವಿಲಾಸ ಆಸ್ಪತ್ರೆಯ ವೈದ್ಯರಿಂದ ಎರಡನೆ ಬಾರಿಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಈ ಆಸ್ಪತ್ರೆಯ ವೈದ್ಯರೂ ಗರ್ಭಪಾತ ಸಲ್ಲದು ಎಂದು ತಿಳಿಸಿದ್ದರು. ಈ ಎರಡೂ ವರದಿಗಳನ್ನು ಆಧರಿಸಿದ ನ್ಯಾಯಪೀಠವು ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದೆ. ಈ ಮಧ್ಯೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು(ನಿಮ್ಹಾನ್ಸ್) ಗರ್ಭಪಾತಕ್ಕೆ ಒಪ್ಪಿಗೆ ನೀಡಿದೆ ಎಂಬ ವರದಿಯನ್ನು ಬಾಲಕಿಯ ಪೋಷಕರು ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದ್ದರು.