×
Ad

ಕನ್ನಡ ಶಾಲೆಗಳನ್ನು ಪುನಾರಂಭಿಸಲು ಕಸಾಪ ಮನವಿ

Update: 2016-04-14 22:11 IST

ಚಿಕ್ಕಮಗಳೂರು, ಎ.14: ಮುಚ್ಚಿರುವ ಕನ್ನಡ ಶಾಲೆಗಳನ್ನು ಪುನಾರಂಭಿಸಬೇಕು. ಆ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಉಳಿಯಲು ಮುಂದಾಗಬೇಕಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯ ಮಾಡಿದ್ದಾರೆ.

ಕನಿಷ್ಠ 1ರಿಂದ 5ನೆ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ, ಪ್ರಾದೇಶಿಕ ಭಾಷೆಯಾದ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕೆಂದು ಪೋಷಕರಲ್ಲಿ ಜಾಗೃತಿ ಮೂಡಿಸಬೇಕು. ಅಂಗನವಾಡಿ, ನರ್ಸರಿ ಶಾಲೆಗಳಲ್ಲಿರುವ ಮಕ್ಕಳನ್ನು ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಲು ಪೋಷಕರನ್ನು, ಸ್ಥಳೀಯ ಆಡಳಿತದ ಘಟಕಗಳಾದ ಗ್ರಾಮ ಪ್ರಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರವನ್ನು ಪಡೆಯಬೇಕೆಂದು ಒತ್ತಾಯಿಸಿದರು.

ಮಾತೃಭಾಷೆಯಲ್ಲೇ ಕಲಿಯುವುದರಿಂದ ಮಕ್ಕಳ ಯೋಚನೆ ಮಾಡುವ ಕ್ರಮ, ತಾರ್ಕಿಕ ಚಿಂತನೆ ತೀರ್ಮಾನಿಸುವ ಶಕ್ತಿ, ವೈಜ್ಞಾನಿಕವಾಗಿ ಹಾಗೂ ಮನಃಶಾಸ್ತ್ರೀಯವಾಗಿ ಸುಲಭವಾಗಿರುತ್ತದೆ. ಮಕ್ಕಳಲ್ಲಿ ವಿಕೃತ ಮನಸ್ಸು ಕರಗಿ ವಿಕಾಸ ಪೂರ್ಣ ಮನಸ್ಸು ಅರಳುತ್ತದೆ ಎಂದು ಜಿಲ್ಲಾಡಳಿತವನ್ನು ಮತ್ತು ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದರು.

2016-17ನೆ ಶೈಕ್ಷಣಿಕ ವರ್ಷದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕನಿಷ್ಠ ಒಂದಾದರೂ ಮುಚ್ಚಿದ ಕನ್ನಡ ಶಾಲೆಯನ್ನು ತೆರೆದು ಕನ್ನಡವನ್ನು ಉಳಿಸಿ ಬೆಳೆಸಬೇಕು. ಕನಿಷ್ಠ ಹೋಬಳಿಗೊಂದು ಮುಚ್ಚಿರುವ ಸರಕಾರಿ ಕನ್ನಡ ಶಾಲೆಗಳನ್ನು ತೆರೆಯಲು ಕಸಾಪ ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸುತ್ತದೆ ಎಂದು ತಿಳಿಸಿದರು.

ಮನವಿ ಸಲ್ಲಿಕೆ ವೇಳೆ ತಾಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಗೌರವ ಕಾರ್ಯದರ್ಶಿ ಜಗದೀಶ್, ಕಸಾಪ ಸದಸ್ಯ ಸೋಮಶೇಖರ್, ನವಕರ್ನಾಟಕ ಅಧ್ಯಕ್ಷ ಸಿ.ಆರ್.ರಘು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News