×
Ad

ಅಂಬೇಡ್ಕರ್‌ರವರು ಮಹಾ ಮಾನವತಾವಾದಿ: ಶಾಸಕಿ ಶಾರದಾ

Update: 2016-04-14 22:18 IST

ಶಿವಮೊಗ್ಗ, ಎ. 14: ದೇಶದ ಸಾಮಾಜಿಕ ಪರಿವರ್ತನೆಗಾಗಿ ಡಾ.ಬಿ.ಆರ್.ಅಂಬೇಡ್ಕರ್‌ರವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕಾ ಅಭಿಪ್ರಾಯಪಟ್ಟಿದ್ದಾರೆ. ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾಗಿದ್ದ 125ನೆಯ ಅಂಬೇಡ್ಕರ್ ಜಯಂತಿ ಸಮಾರಂಭ ಉದ್ಘಾಟಿಸಿದ ನಂತರ ಸಭಿಕರನ್ನುದ್ದೇಶಿಸಿ ಅವರು ಮಾತನಾಡಿದರು. ಜಗತ್ತಿನ ಎಲ್ಲಾ ಮನುಷ್ಯರು ಸಮಾನರು. ಧರ್ಮ ಇರುವುದು ಮನುಷ್ಯನಿಗಾಗಿಯೇ ಹೊರತು, ಮನುಷ್ಯನಿರುವುದು ಧರ್ಮಕ್ಕಲ್ಲ. ದೇವರು ಧರ್ಮದ ಕೇಂದ್ರವಾಗಬಾರದು. ಬದಲಿಗೆ ನೈತಿಕತೆ ಧರ್ಮದ ಕೇಂದ್ರವಾಗಬೇಕು. ಯಾವುದೇ ಧರ್ಮದಲ್ಲಿ ಪರಿವರ್ತನೆಗೆ ಅವಕಾಶವಿರಬೇಕು. ಬದಲಾವಣೆ ನಿಸರ್ಗದ ನಿಯಮ ಎಂದು ಸಾರಿದ್ದರು ಎನ್ನುವುದನ್ನು ವಿವರಿಸಿದರು.

ಪ್ರತಿಯೊಬ್ಬರು ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆಯಿಂದ ಪರಸ್ಪರ ಪ್ರಗತಿ ಹೊಂದಬೇಕು. ಸಮಾನತೆಯನ್ನು ಎಲ್ಲಿಯವರೆಗೆ ನಿರಾಕರಿಸುತ್ತೀರೋ ಅಲ್ಲಿಯವರೆಗೆ ಪ್ರಜಾಸಕ್ತಿಯನ್ನು ಗಂಡಾಂತರಕ್ಕೆ ಸಿಲುಕಿಸುತ್ತೇವೆ ಎನ್ನುವುದು ಅಂಬೇಡ್ಕರ್ ಅಭಿಪ್ರಾಯವಾಗಿತ್ತು ಎಂದರು

. ವಾರ್ತಾ ಇಲಾಖೆ ಹೊರತಂದ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಕಿರುಹೊತ್ತಿ ಗೆಯನ್ನು ಬಿಡುಗಡೆಗೊಳಿಸಿದ ನಂತರ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್‌ರವರು ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಎನ್ನುವುದು ಜನಸಮುದಾಯಗಳ ಹಿತಕಾಯುವ ಶಾಸನಗಳನ್ನು ರಚಿಸಲೇ ಹೊರತು ಜನವಿರೋಧಿ ಕೆಲಸ ಮಾಡುವುದಕ್ಕಲ್ಲ ಎನ್ನುವುದು ಅಂಬೇಡ್ಕರ್ ನಿಲುವಾಗಿತ್ತು. ಶೋಷಿತರು ಶಿಕ್ಷಣ ಪಡೆದು ಪ್ರಜ್ಞಾವಂತರಾಗಬೇಕು. ತಮ್ಮ ಹಕ್ಕು ಪಡೆಯಲು ಸಂಘಟಿತರಾಗಿ ಹೋರಾಡಬೇಕು. ಸ್ವಾಭಿಮಾನಿಗಳಾಗಿ ಬದುಕಬೇಕೆ ಹೊರತು ಗುಲಾಮರಾಗಿ ಬದುಕಬಾರದೆಂದು ಹೇಳುತ್ತಿದ್ದರು ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಶಾಸಕ ಕೆ.ಬಿ. ಪ್ರಸನ್ನಕುಮಾರ್ ವಹಿಸಿದ್ದರು. ಸುಡಾ ಅಧ್ಯಕ್ಷ ಎನ್. ರಮೇಶ್, ಮೇಯರ್ ಎಸ್.ಕೆ. ಮರಿಯಪ್ಪ, ಉಪಮೇಯರ್ ಮಂಗಳ ಅಣ್ಣಪ್ಪ, ಜಿಲ್ಲಾಧಿಕಾರಿ ವಿ.ಪಿ ಇಕ್ಕೇರಿ, ಜಿಪಂ ಸಿಇಒ ರಾಕೇಶ್‌ಕುಮಾರ್ ಉಪಸ್ಥಿತರಿದ್ದರು.ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಪ್ರತಿಜ್ಞಾವಿಧಿ ಬೋಧಿಸಿದರು. ಅಪರ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News