×
Ad

ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಶಿಕ್ಷಣ ಕಡಾ್ಡಯ ಸರಿಯಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2016-04-14 23:31 IST
ಸಮಾಜ ಕಲ್ಯಾಣ ಇಲಾಖೆಯಿಂದ ಗುರುವಾರ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚಾಮರಾಜನಗರ ಜಿಲ್ಲೆಯ ನಿವೃತ್ತ ಇಂಜಿನಿಯರ್ ಡಾ.ಚಿನ್ನಸ್ವಾಮಿ ಎಸ್.ಮಾಂಬಳ್ಳಿ ಅವರಿಗೆ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಐದು ಲಕ್ಷ ರೂ. ನಗದು ಹಾಗೂ ಬಂಗಾರದ ಪದಕವನ್ನು ಒಳಗೊಂಡಿದೆ.

ಬೆಂಗಳೂರು, ಎ. 14: ಶೋಷಿತರು ಸೇರಿದಂತೆ ಎಲ್ಲರಿಗೂ ಮತದಾನದ ಹಕ್ಕನ್ನು ನೀಡಿದ್ದ ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ಕೆಲ ರಾಜ್ಯಗಳಲ್ಲಿ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಶಿಕ್ಷಣ ಕಡ್ಡಾಯಗೊಳಿಸುವ ನಿಯಮ ಸರಿಯಲ್ಲ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಿಸಿದ್ದಾರೆ.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಾರಾಷ್ಟ್ರ, ಹರಿಯಾಣ ಹಾಗೂ ರಾಜಸ್ಥಾನದಲ್ಲಿ ಗ್ರಾಪಂ, ತಾಪಂ ಹಾಗೂ ಜಿಪಂ ಅಧ್ಯಕ್ಷರಿಗೆ ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕೆಂಬ ನಿಯಮ ಮಾಡಿರುವುದು ಸಲ್ಲ ಎಂದರು.
 ದೇಶದ ಸಾಕ್ಷರತೆ ಪ್ರಮಾಣ ಇನ್ನೂ ಶೇ.50ನ್ನು ಮೀರಿಲ್ಲ. ಈ ನಿಯಮದಿಂದ ಮಹಿಳೆಯರಿಗೆ ಮತ್ತು ಶೋಷಿತ ಸಮುದಾಯಗಳಿಗೆ ಅನ್ಯಾಯ ಆಗಲಿದೆ. ಮಾತ್ರವಲ್ಲ, ಉಳ್ಳವರೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ. ಆದುದರಿಂದ ಅದನ್ನು ಎಲ್ಲರೂ ವಿರೋಧಿಸಬೇಕೆಂದು ಸಲಹೆ ನೀಡಿದರು.
ಸ್ವಾಭಿಮಾನದ ಸಂಕೇತ: ಅಂಬೇಡ್ಕರ್ ಎಂದೂ ಮೂರ್ತಿ ಪೂಜೆ ಮಾಡಲಿಲ್ಲ. ಆದರೆ, ಅವರ ಬಳಿ ಬುದ್ಧನ ಮೂರ್ತಿಯೊಂದು ಇತ್ತು, ಅದು ಅವರಿಗೆ ಪ್ರೇರಣೆ. ಕೆಲವರಿಂದ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಯನ್ನು ವಿರೋಧಿಸುತ್ತಾರೆ. ಇದು ಸರಿಯಲ್ಲ, ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಶೋಷಿತರ ಸ್ವಾಭಿಮಾನ, ಸ್ಪೂರ್ತಿಯ ಸಂಕೇತ ಎಂದು ಸ್ಪಷ್ಟಪಡಿಸಿದರು.
ಒಗ್ಗಟಿನಿಂದ ಯಶಸ್ಸು: ದಲಿತ ಸಮುದಾಯ ಒಗ್ಗಟ್ಟು ಕಾಯ್ದುಕೊಳ್ಳಬೇಕು. ಇದರಿಂದ ಯಾವುದೇ ಕೆಲಸವನ್ನಾದರೂ ಯಶಸ್ವಿಯಾಗಿ ಸಾಧಿಸಬಹುದು ಎಂದ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಕೆಲ ಜಿಲ್ಲೆಗಳಲ್ಲಿನ್ನೂ ಅಂಬೇಡ್ಕರ್ ವಿಚಾರಧಾರೆಗಳ ಅರಿವು ಜನರಿಗಿಲ್ಲ. ಹೀಗಾಗಿ ಚಳವಳಿ ಹಾಗೂ ಸಾಧನೆಗಳ ಮೇರು ವ್ಯಕ್ತಿ ಅಂಬೇಡ್ಕರ್ ತತ್ವಾದರ್ಶಗಳ ಪ್ರಚಾರ ಅಗತ್ಯ ಎಂದರು.
ಕೊಠಡಿಗೆ ಸೀಮಿತ ಸಲ್ಲ: ಅಂಬೇಡ್ಕರ್ ಅವರ ಜಯಂತಿ ವಿಧಾನಸೌಧದ ಹೊರಗಿನಿಂದ ಬ್ಯಾಂಕ್ವೆಟ್ ಹಾಲ್‌ಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಅದು ಕೊಠಡಿಗೆ ಸೀಮಿತಗೊಳ್ಳಬಾರದು. ಬದಲಿಗೆ ಜನ ಜಾಗೃತಿಯ ಸಮಾರಂಭ ಆಗಬೇಕು ಎಂದು ಖರ್ಗೆ ಸೂಚಿಸಿದರು.
ಅತ್ಯಂತ ಪ್ರಗತಿಪರ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಹಾರಾಷ್ಟ್ರ ಶನಿ ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರು ಹೋರಾಟ ಮಾಡಬೇಕಾಯಿತು. ಆದರೆ, ನಮಗೆ ಎಂದಿಗೂ ‘ಶನಿ’ ಜೊತೆಯಲ್ಲೇ ಇರುತ್ತದೆ ಎಂದ ನುಡಿದ ಮಲ್ಲಿಕಾರ್ಜುನ ಖರ್ಗೆ, ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಡವರ ಯುಗ: ರಾಜ್ಯದಲ್ಲಿ ಬಡವರ ಯುಗ ಆರಂಭವಾಗಿದ್ದು, ದಲಿತರ ಬೇಡಿಕೆ ಈಡೇರಿಸುವ ಸಿಎಂ ಸಿಕ್ಕಿದ್ದು, ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು.
ಪ್ರಶಸ್ತಿ ಪುರಸ್ಕೃತ ಡಾ.ಚಿನ್ನಸ್ವಾಮಿ ಮಾಂಬಳ್ಳಿ ಮಾತನಾಡಿ, ವಿಶ್ವದೆಲ್ಲೆಡೆ ಅಂಬೇಡ್ಕರ್ ಜನ್ಮ ದಿನಾಚರಣೆ ಆಚರಿಸುವಂತೆ ಆಗಬೇಕು. ಅಂಬೇಡ್ಕರ್‌ವಿಚಾರಧಾರೆಗಳನ್ನು ಜನರಿಗೆ ತಲುಪಿಸಲು ವಾಹಿನಿಯೊಂದನ್ನು ಆರಂಭಿಸಲು ಸರಕಾರ ನೆರವು ನೀಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ 1ಲಕ್ಷಕ್ಕೂ ಹೆಚ್ಚು ಅಂಬೇಡ್ಕರ್ ಪ್ರತಿಮೆಗಳಿದ್ದು, ಅತ್ಯಂತ ಹೆಚ್ಚು ಜನಮೆಚ್ಚಿದ ನಾಯಕ, ವಿಶ್ವದ ನಾಯಕ ಎಂದ ಅವರು, ಮೇರು ವ್ಯಕ್ತಿತ್ವದ ಅಂಬೇಡ್ಕರ್ ಅವರು ಸಾವನ್ನಪ್ಪಿದ ಸಂದರ್ಭದಲ್ಲಿ ಅವರ ಮೃತದೇಹ ಸಾಗಿಸಲು ಕೂಡಾ ಹಣವೇ ಇರಲಿಲ್ಲ ಎಂದು ಅವರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಡಾ.ಚಿನ್ನಸ್ವಾಮಿ ಮಾಂಬಳ್ಳಿ ರಚಿಸಿರುವ ಅಂಬೇಡ್ಕರ್ ಅವರ ಅಪರೂಪದ ಛಾಯಾಚಿತ್ರಗಳ ಕೃತಿ, ಲೇಖಕ ಸಿದ್ದಲಿಂಗಯ್ಯನವರ ಕವಿತೆಗಳ ಉರ್ದು ಅನುವಾದಿತ ಕೃತಿ ಹಾಗೂ ಶಿವರಾಮು ಅವರ ಡಾ.ಅಂಬೇಡ್ಕರ್ ಜೀವನದ ಪ್ರಮುಖ ಘಟನೆಗಳು ಕೃತಿ ಲೋಕಾರ್ಪಣೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News