×
Ad

ನ್ಯಾಯಾಂಗದಲ್ಲೂ ಮೀಸಲಾತಿ ಕಲ್ಪಿಸಿ: ಉಗ್ರಪ್ಪ

Update: 2016-04-14 23:36 IST

ಬೆಂಗಳೂರು, ಎ. 14: ನ್ಯಾಯಾಂಗ, ರಾಜ್ಯಸಭಾ ಹಾಗೂ ವಿಧಾನ ಪರಿಷತ್‌ನಲ್ಲೂ ಪರಿಶಿಷ್ಟ ಜಾತಿ- ಪಂಗಡ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಮತ್ತು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣಾ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಗುರುವಾರ ನಗರದ ಕಬ್ಬನ್‌ಪಾರ್ಕ್‌ನ ಎನ್‌ಜಿಓ ಸಭಾಂಗಣದಲ್ಲಿ ಪ್ರಜಾ ವಿಮೋಚನಾ ಚಳವಳಿ-ಸಮತಾವಾದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರ 125ನೆ ಜನ್ಮದಿನದ ಸಂಭ್ರಮಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇವಲ ಗ್ರಾಮ-ತಾಲೂಕು ಪಂಚಾಯತ್‌ಗಳಲ್ಲಿ ಮೀಸಲಾತಿ ಕಲ್ಪಿಸಿರುವುದು ಸರಿಯಲ್ಲ. ಮುಂದೆ ನ್ಯಾಯಾಂಗ, ರಾಜ್ಯಸಭಾ ಹಾಗೂ ವಿಧಾನ ಪರಿಷತ್‌ನಲ್ಲೂ ಮೀಸಲಾತಿ ಜಾರಿಯಾಗಬೇಕಿದೆ ಎಂದ ಅವರು, 68 ವರ್ಷಗಳಾದರೂ ಉನ್ನತ ಸ್ಥಾನಗಳಲ್ಲಿರುವ ಹಿಂದುಳಿದ ವರ್ಗ ಮತ್ತು ದಲಿತರಿಗೆ ಸೂಕ್ತ ಹುದ್ದೆಗಳು ಬಂದಿಲ್ಲ. ಪ್ರಬಲ ಜಾತಿಗಳು ಮಾತ್ರ ಉನ್ನತ ದರ್ಜೆಯ ಹುದ್ದೆಗಳನ್ನು ಪಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಕರ್ನಾಟಕ ವ್ಯಾಪ್ತಿಯಲ್ಲಿ ಶೇ.95 ರಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ ಬಹುಪಾಲು ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟವರಲ್ಲಿ ದಲಿತ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಆರೋಪಿಗಳಿಗೆ ಕಾನೂನು ಪ್ರಕಾರದಲ್ಲಿ ಶಿಕ್ಷೆಯಾಗುತ್ತಿಲ್ಲ. ಏಕೆಂದರೆ, ಆರ್ಥಿಕ ಮತ್ತು ರಾಜಕೀಯವಾಗಿ ಪ್ರಬಲ ಶಕ್ತಿಗಳು ಆರೋಪಿಗಳನ್ನು ರಕ್ಷಣೆ ಮಾಡುತ್ತಿವೆ. ಇತ್ತೀಚಿಗೆ ರಾಷ್ಟ್ರ ಮಟ್ಟದ ಸರ್ವೇ ಪ್ರಕಾರ ಕೇವಲ ಶೇ.2.5 ರಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಬಾರಿ ದಲಿತಪರ ಚಿಂತನೆ ಮಾಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಬೇಕು ಎಂದ ಅವರು, ದಲಿತರು ದೌರ್ಜನ್ಯ ನಡೆಸಲು ಮುಂದಾಗಬಾರದು, ಅವರಿಗಾಗಿ ಅನೇಕ ಕಾನೂನುಗಳಿವೆ, ಎಂದಿಗೂ ಕಾನೂನು ಹೋರಾಟಕ್ಕೆ ಮುಂದಾಗಬೇಕು. ಅಲ್ಲದೆ, ದಲಿತರ ಮೇಲಿನ ದೌರ್ಜನ್ಯ ಖಂಡಿಸುವ ಸಂಘಟನೆಗಳು ಅಧಿಕವಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮಹಿ ಮಹೇಶ್, ಸಂಘಟನೆ ರಾಜ್ಯಾಧ್ಯಕ್ಷ ಅನೇಕಲ್ ಕೃಷ್ಣಪ್ಪ, ಕಾರ್ಯದರ್ಶಿ ಕೆ.ಎಲ್.ಶಂಕರ್, ರವಿ, ಇಂಡ್ಲವಾಡಿ ಬಸವರಾಜು ಹಾಗೂ ಡಾ.ಕೆ.ಎಸ್.ಸ್ವಾಮಿ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News