×
Ad

ಬರನಿರ್ವಹಣೆಗಾಗಿ ದಾವಣಗೆರೆ ಜಿಲ್ಲೆಗೆ 50 ಲಕ್ಷ ರೂ.: ಸಚಿವ ಡಾ.ಶಾಮನೂರು ಶಿವಶಂಕರಪ್ಪ

Update: 2016-04-15 22:04 IST

ದಾವಣಗೆರೆ, ಎ. 15: ಕುಡಿಯುವ ನೀರು ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ವಿಫಲರಾದರೇ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಎಚ್ಚರಿಸಿದರು.

ತೋಟಗಾರಿಕಾ ಇಲಾಖೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಲಪುಷ್ಪ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರಕಾರ ಹಣ ಬಿಡುಗಡೆ ಮಾಡಿದೆ.ಎಲ್ಲಿ ನೀರು ಲಭ್ಯವಿದೆಯೋ ಅಲ್ಲಿಂದ ನೀರಿನ ಸಮಸ್ಯೆ ಇರುವ ಕಡೆ ನೀರಿನ ಪೂರೈಕೆ ಮಾಡಲಾಗುವುದು. ಜಿಲ್ಲೆಯ ಹರಪನಹಳ್ಳಿ, ಜಗಳೂರು ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಆದ್ದರಿಂದ ಅವಶ್ಯಕತೆ ಇರುವಲ್ಲಿ ಬೋರ್‌ವೆಲ್ ತೆಗೆಸಿ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬರನಿರ್ವಹಣೆಗಾಗಿ ರಾಜ್ಯ ಸರಕಾರದಿಂದ ದಾವಣಗೆರೆ ಜಿಲ್ಲೆಗೆ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಈ ಅನುದಾನವನ್ನು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ಅವರ ಮೇಲೆ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ನಂತರ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿದರು. ಮೇಯರ್ ಅಶ್ವಿನಿ ಪ್ರಶಾಂತ್, ಉಪಮೇಯರ್ ರಾಜಶೇಖರ್, ಸಿಇಒ ಆರ್.ಗಿರೀಶ್, ಎಡಿಸಿ ಇಬ್ರಾಹೀಂ ಮೈಗೂರು, ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

11ಕೋಟಿ ರೂ. ವೆಚ್ಚದಲ್ಲಿ ಗಾಜಿನಮನೆ

ನಗರದ ಕುಂದುವಾಡ ಕೆರೆಯ ಬಳಿ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ಗಾಜಿನ ಮನೆ ನಿರ್ಮಾಣವಾಗುತ್ತಿದ್ದು, ಈಗಾಗಲೇ ರಾಜ್ಯ ಸರಕಾರದಿಂದ 5 ಕೋಟಿ ರೂ. ಬಿಡುಗಡೆಯಾಗಿ, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದ ಅವರು, ಕುಂದುವಾಡ ಕೆರೆ ಬಳಿ ಸುಂದರ ಉದ್ಯಾನವನ, ಸಂಗೀತ ಕಾರಂಜಿ, ವಿದ್ಯುತ್ ದೀಪದ ಅಲಂಕಾರ, ವಿನ್ಯಾಸಗೊಳಿಸುವ ಕಾರ್ಯ ಪ್ರಗತಿ ಯಲ್ಲಿದೆ. ನಗರವನ್ನು ಉತ್ತಮ ಪ್ರವಾಸಿತಾಣವನ್ನಾಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು.

ಫಲಪುಷ್ಪ ಪ್ರದರ್ಶನ ದಾವಣಗೆರೆಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿಯ ಆವರಣದಲ್ಲಿ ಶುಕ್ರವಾರದಿಂದ ಜಿಲ್ಲಾ ತೋಟಗಾರಿಕಾ ಸಂಘ ಹಾಗೂ ಇಲಾಖೆ ಮೂರು ದಿನಗಳ ಕಾಲ ಪಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.

ವಿವಿಧ ಬಗೆಯ ತರಕಾರಿಗಳ ಕಲಾಕೃತಿಗಳು, ವಿವಿಧ ಬಗೆಯ ಹೂವಿನಲ್ಲಿ ಅಲಂಕೃತಗೊಂಡ ನಂದಿ, ಬಾಳೆದಿಂಡಿನಿಂದ ರೂಪುಗೊಂಡ ದೋಣಿ ಆಕಾರದ ಮಂಟಪ, ನೀರಿನ ಝರಿ, ಅಣಬೆ, ಡೈನೋಸರಸ್, ಆನೆ, ಹೂವಿನಲ್ಲಿ ತಯಾರಾದ ಹೃದಯ, ಹಳದಿ ಮತ್ತು ಬಿಳಿಯ ಹೂವಿನಲ್ಲಿ ನಿರ್ಮಾಣಗೊಂಡ ಜೋಡಿ ಜಿರಾಫೆೆಗಳು ಎಲ್ಲರನ್ನು ಕೈಬೀಸಿ ಕರೆಯುತ್ತಿವೆ. ಇನ್ನು, ಹಣ್ಣು, ತರಕಾರಿಗಳ ಕೆತ್ತನೆ, ಕುಬ್ಜ ಗಿಡಗಳ ಪ್ರದರ್ಶನ, ರಂಗೋಲಿಯಲ್ಲಿ ಅರಳಿದ ಭಾವಚಿತ್ರಗಳ ಆಕರ್ಷಣೆಯ ಜೊತೆಗೆ ವಿವಿಧ ಇಲಾಖೆಗಳ ವಸ್ತು ಪ್ರದರ್ಶನದ ಮಳಿಗೆಗಳು, ಹನಿನೀರಾವರಿ ಉಪಕರಣಗಳ ಉತ್ಪಾದಕರ ಮಳಿಗೆ, ಸಾವಯವ ಕೃಷಿ ಪದಾರ್ಥಗಳು ಪ್ರದರ್ಶನಕ್ಕೆ ಇಡಲಾಗಿದೆ.

ತರಕಾರಿಯಲ್ಲಿ ಅರಳಿದ ಕಲೆ

 ಸುಮಾರು 500 ಕೆಜಿಯ 15 ವಿವಿಧ ಬಗೆಯ ತರಕಾರಿ ಹಾಗೂ ಹಣ್ಣುಗಳಲ್ಲಿ ಮಂಗಳೂರು ಮೂಲದ ವಿದ್ಯಾದರ ಎಂಬವರ ತಂಡ ನಾವು ಊಹಿಸದಂತ ಪ್ರಾಣಿ, ಪಕ್ಷಿ, ಚಿತ್ರಗಳು ಪ್ರದರ್ಶನದಲ್ಲಿ ಅರಳಿಸಿದ್ದಾರೆ.

10 ಕ್ವಿಂಟಲ್ ಹೂ ಬಳಕೆ

ಫಲಪುಷ್ಪ ಪ್ರದರ್ಶನದಲ್ಲಿ 10 ಕ್ವಿಂಟಲ್ ವಿವಿಧ ಬಗೆಯ ಹೂಗಳ ಬಳಸಲಾಗಿದೆ. ಜೋಡಿ ಜಿರಾಫೆ ನಿರ್ಮಾಣಕ್ಕೆ 1 ಕ್ವಿಂಟಲ್ ಕಬ್ಬರ್ ಸೇವಂತಿಗೆ ಹಾಗೂ 30 ಕೆ.ಜಿ. ರಾಜಸೇವಂತಿಗೆ, ಸುಗಂಧರಾಜ, ಜರ್ಬೇರಾ ಸೇರಿದಂತೆ ವಿವಿಧ ಹೂಗಳಿಂದ ಕಲಾಕೃತಿ ನಿರ್ಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News