ಬೆಳೆ ವಿಮೆ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಅಗತ್ಯ: ಡಿಸಿ ವಿ.ಪಿ.ಇಕ್ಕೇರಿ
ಶಿವಮೊಗ್ಗ, ಎ. 15: ಕೇಂದ್ರ ಸರಕಾರ ಜಾರಿ ತಂದಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ರೈತ ಸಮುದಾಯಕ್ಕೆ ವ್ಯಾಪಕ ಪ್ರಚಾರ ಅಗತ್ಯ ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಹೇಳಿದ್ದಾರೆ.
ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ ಜಾಗೃತಿಗಾಗಿ ರೈತ ಸಮ್ಮೇಳನ ಮತ್ತು ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ನೆರವಿಗಾಗಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡುವ ಮೂಲಕ ರೈತರು ಯೋಜನೆ ಸದುಪಯೋಗಪಡೆದುಕೊಳ್ಳುವಂತೆ ಮಾಡಬೇಕು ಎಂದು ಅವರು ತಿಳಿಸಿದರು.
ಬೇರೆ ಬೇರೆ ಕಾರಣಗಳಿಂದ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿರುವುದು ಸರಿಯಲ್ಲ ಎಂದ ಅವರು, ಸರಕಾರ ನೀಡುವ ಬೆಳೆ ವಿಮೆ ಸೇರಿದಂತೆ ವಿವಿಧ ಯೋಜನೆಗಳ ಸದುಪಯೋಗಪಡೆದುಕೊಂಡು ಉತ್ತಮ ಬೇಸಾಯ ಮಾಡಬೇಕು ಎಂದರು.
ದೇಶಕ್ಕೆ ಅನ್ನ ಕೊಡುವ ರೈತ ಮುನಿಸಿಕೊಂಡರೆ ಸ್ಥಿತಿ ಗಂಭೀರ ವಾಗಲಿದೆ ಎಂದ ಅವರು, ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಶೇ. 8ರಷ್ಟು ಬತ್ತದ ಬೆಳೆ ಕಡಿಮೆಯಾಗುತ್ತಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಆಹಾರ ಕೊರತೆಯಾಗಲಿದೆ ಎಂದರು.
ಅಂತೆಯೇ ಚಾಲ್ತಿಯಲ್ಲಿರುವ ಯೋಜನೆಗಳ ಬಗ್ಗೆ ಜಾಗೃತಿಯ ಅವಶ್ಯತೆಯಿದ್ದು, ಪ್ರಧಾನಮಂತ್ರಿಗಳ ಕೃಷಿ ವಿಮೆ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು. ಇದಕ್ಕಾಗಿ ರೈತ ಸಂಪರ್ಕ ಕೇಂದ್ರಗಳು, ಕೃಷಿ ವಿಶ್ವ ವಿದ್ಯಾನಿಲಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ ರೈತ ಸಂಬಂಧಿ ಎಲ್ಲ ಇಲಾಖೆಗಳು ರೈತರಿಗೆ ಜಾಗೃತಿ ಮೂಡಿಸಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಕೆನರಾಬ್ಯಾಂಕ್‌ನ ಕೇಂದ್ರ ವ್ಯವಸ್ಥಾಪಕ ಎನ್.ಎಚ್.ಮದನ್‌ಕುಮಾರ್ ಮಾತನಾಡಿ, ರೈತರು ತಾವು ಬೆಳೆದ ಬೆಳೆಯನ್ನು ಅಂತಿಮವಾಗಿ ಮಾರಾಟವಾಗುವವರೆಗೂ ಒಂದಿಲ್ಲೊಂದು ಸಂಕಷ್ಟದಲ್ಲಿರುತ್ತಾರೆ. ಅದನ್ನು ಮನಗಂಡ ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ರೈತರಿಗೆ ಯಾವುದೇ ಪ್ರಕೃತಿಯ ನಷ್ಟವಾದರೂ ವಿಮೆ ನೀಡುವ ಪ್ರಧಾನಮಂತ್ರಿ ಬೆಳೆವಿಮೆ ಯಾಜನೆಯನ್ನು ಜಾರಿಗೆ ತಂದಿದೆ ಎಂದರು.
ಸುಲಭ ಕಂತು ದೊಡ್ಡ ಲಾಭ ಇದು ಈ ಯೋಜನೆಯ ಉದ್ದೇಶವಾಗಿದ್ದು, ಈ ಹಿಂದಿನ ಎಲ್ಲ ಬೆಳೆ ವಿಮೆಗಳಿಗಿಂತಲೂ ಭಿನ್ನವಾಗಿದೆ ಹಾಗೂ ರೈತರಿಗೆ ಅನುಕೂಕರವಾಗಿದೆ ಎಂದರು.
ಬೆಂಕಿ, ಸಿಡಿಲು, ಬಿರುಗಾಳಿ, ಸುಂಟರಗಾಳಿ, ಆಲಿಕಲ್ಲು ಭಾರೀ ಮಳೆ, ಪ್ರವಾಹ, ಭೂಕುಸಿತ, ಕ್ಷಾಮ, ಹವಾಮಾನ ವೈಪರೀತ್ಯ, ರೋಗಬಾಧೆ ಸೇರಿದಂತೆ ವಿವಿಧ ಪ್ರಾಕೃತಿಕ ಆಕಸ್ಮಿಕಗಳಿಗೆ ಶೇಕಡಾವಾರು ಕನಿಷ್ಠ ನಷ್ಟವಿದ್ದರೂ ವಿಮೆ ಸೌಲಭ್ಯ ಸಿಗಲಿದೆ. ಅಲ್ಲದೆ ಬಿತ್ತನೆಗೆ ಸಿದ್ಧಪಡಿಸಿ ಸಾಧ್ಯವಾಗದ ಸ್ಥಿತಿ ಾಗೂ ಕಟಾವು ನಂತರ ಆಗುವ ಅವಘಢಗಳಿಗೂ ಬೆಳೆವಿಮೆ ರಕ್ಷಣೆಗೆ ಬರಲಿದೆ ಎಂದರು.
ರೈತರು ಈ ಬೆಳೆ ವಿಮಾ ಯೋಜನೆಗಾಗಿ ಸಮೀಪದ ಬ್ಯಾಂಕ್ ಶಾಖೆ ಅಥವಾ ಅನುಷ್ಠಾನ ಸಂಸ್ಥೆಗಳನ್ನು ಸಂಪರ್ಕಿಸಿ ವಿಮೆ ಪಡೆಯುವಂತೆ ಅವರು ಹೇಳಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ ಡಿ.ಚೆನ್ನಣ್ಣನವರ್, ಜಂಟಿ ಕೃಷಿ ನಿರ್ದೇಶಕ ಕೆ.ಮಧುಸೂದನ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ವಿಶ್ವನಾಥ್, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಟಿ.ಜಿ.ಶಂಕರಕುಮಾರ್, ಪ್ರಾಧ್ಯಾಪಕರಾದ ನಾರಾಯಣಸ್ವಾಮಿ, ಡಾ.ನಾಗರಾಜ್ ಅಡಿವಪ್ಪರ್ ಮತ್ತಿತರರು ಉಪಸ್ಥಿತರಿದ್ದರು.