×
Ad

ಸರಕಾರದ ಸಾವಿರಾರು ಹಗರಣ ಹೊರತರಬಲ್ಲೆ, ಆದ್ರೆ ಪ್ರಯೋಜನವಿಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2016-04-15 22:10 IST

ಶಿವಮೊಗ್ಗ, ಎ. 15: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸಾವಿರಾರು ಹಗರಣಗಳನ್ನು ಹೊರತರಬಲ್ಲೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಹಗರಣ ಬಯಲಿಗೆಳೆದರೂ ಯಾವುದೇ ಪ್ರಯೋಜನವಿಲ್ಲದಂತಹ ಪರಿಸ್ಥಿತಿಯಿದೆ. ಮುಂದಿನ ಅವಧಿಯಲ್ಲಿ ರಾಜ್ಯದ ಜನತೆ ಜೆಡಿಎಸ್‌ಗೆ ಅಧಿಕಾರ ಕೊಟ್ಟರೆ, ಈ ಹಗರಣಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ಅವಧಿಯಲ್ಲಿ ಜೆಡಿಎಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವುದಿಲ್ಲ ಎಂಬ ಗ್ಯಾರಂಟಿ ಸಿದ್ದರಾಮಯ್ಯರವರಿಗಿದೆ. ಈ ಹಿನ್ನೆಲೆಯಲ್ಲಿಯೇ ಅವರು ರಾಜ್ಯದ ಖಜಾನೆ ಖಾಲಿ ಮಾಡಿ, ದಿವಾಳಿ ಎಬ್ಬಿಸಲು ತೀರ್ಮಾನಿಸಿದ್ದಾರೆ. ಅವರ ದುರಾಡಳಿತದಿಂದ 2017ರ ವೇಳೆಗೆ ರಾಜ್ಯದ ಜನತೆಯ ಮೇಲೆ ಸುಮಾರು 2008 ಕೋಟಿ ರೂ. ಸಾಲದ ಹೊರೆ ಬೀಳಲಿದೆ ಎಂದು ದೂರಿದರು. ವಿಫಲ: ಪ್ರಸ್ತುತ ರಾಜ್ಯದಲ್ಲಿ ಭೀಕರ ಬರಗಾಲ ಮನೆ ಮಾಡಿದ್ದು, ನಾಗರಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಬರ ನಿರ್ವಹಣೆಯಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದ ಅವರು, ಬರ ಪೀಡಿತ ನಾಗರಿಕರಿಗೆ ಸ್ಪಂದಿಸುವ ಬದಲು ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಬಿಜೆಪಿ ನಾಯಕರು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಬರ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ. ರಾಜ್ಯದ ಜನತೆಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. *ವ್ಯಂಗ್ಯ: ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಬಿ.ಎಸ್.ಯಡಿಯೂರಪ್ಪರವರು, ಇತರ ಪಕ್ಷದ ನಾಯಕರನ್ನು ಬಿಜೆಪಿಗೆ ಬನ್ನಿ ಪಕ್ಷ ಕಟ್ಟೋಣ ಎಂದು ಹೇಳಿದ್ದಾರೆ. ಇದು ಬಿಜೆಪಿ ಗಟ್ಟಿ ಇಲ್ಲದೇ ಇರುವುದನ್ನು ತೋರಿಸುತ್ತದೆ ಎಂದು ಇದೇ ಸಂದರ್ಭದಲ್ಲಿ ವ್ಯಂಗ್ಯವಾಡಿದರು.

ಸರಕಾರದ ಕಾರ್ಯವೈಖರಿಗೆ ಸ್ಪೀಕರ್ ಟೀಕೆ ಸಾಕ್ಷಿ

ರಾಜ್ಯ ಸರಕಾರದ ಕಾರ್ಯವೈಖರಿಯ ಬಗ್ಗೆ ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪರವರೇ ಬಹಿರಂಗವಾಗಿ ಅಸಮಾ ಧಾನ ವ್ಯಕ್ತಪಡಿಸುತ್ತಿದ್ದಾರೆ. ಇದು ರಾಜ್ಯ ಸರಕಾರದ ಕಾರ್ಯವೈಖರಿ ಹೇಗಿದೆ ಎಂಬುವುದನ್ನು ತೋರಿಸುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲವು ಸಚಿವರಿಗೆ ಬರ ವಿಚಾರದಲ್ಲಿ ಉಸ್ತುವಾರಿಯನ್ನು ಕೊಡಲಾಗಿದೆ. ಆದರೆ ಅವರು ತಮಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆಯೇ ಎಂಬುದೇ ಅನುಮಾನವಾಗಿದೆ ಎಂದು ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News