ರಾಜ್ಯದಲ್ಲಿ ನಬಾರ್ಡ್ ಸಾರ್ವಕಾಲಿಕ ದಾಖಲೆ: ಎಂ.ಐ.ಗಣಗಿ

Update: 2016-04-15 17:20 GMT

13,509 ಕೋಟಿ ರೂ. ವಹಿವಾಟು
ಬೆಂಗಳೂರು, ಎ.15: ರಾಜ್ಯದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್)2015-16ನೆ ಸಾಲಿನಲ್ಲಿ 13,509 ಕೋಟಿ ರೂ. ವಹಿವಾಟಿನೊಂದಿಗೆ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ ಎಂದು ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಐ.ಗಣಗಿ ತಿಳಿಸಿದ್ದಾರೆ.
ಶುಕ್ರವಾರ ನಗರದ ಕೆ.ಜಿ.ರಸ್ತೆಯಲ್ಲಿನ ನಬಾರ್ಡ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 13,509 ಕೋಟಿ ರೂ.ವಹಿವಾಟಿನೊಂದಿಗೆ 2015-16ನೆ ಸಾಲಿನಲ್ಲಿ 3 ಲಕ್ಷ ಕೋಟಿ ರೂ.ಬ್ಯಾಲನ್ಸ್ ಶೀಟ್ ಹೊಂದಿರುವ ಮೊಟ್ಟಮೊದಲ ಅಭಿವೃದ್ಧಿ ಹಣಕಾಸು ಸಂಸ್ಥೆಯ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದರು.
ಕೃಷಿಯಲ್ಲಿ ಬಂಡವಾಳ ನಿರ್ಮಾಣಕ್ಕೆ ನಬಾರ್ಡ್‌ನಿಂದ ಬ್ಯಾಂಕುಗಳಿಗೆ 6,766.90 ಕೋಟಿ ರೂ. ದೀರ್ಘಾವಧಿ ಪುನರ್ಧನ ನೀಡಲಾಗಿದ್ದು, ಕಳೆದ ವರ್ಷಕ್ಕಿಂತ ಶೇ.60ರಷ್ಟು ವೃದ್ಧಿಸಿದೆ. ಸಹಕಾರಿ ಬ್ಯಾಂಕುಗಳಿಗೆ 1,519 ಕೋಟಿ ರೂ.ಹಾಗೂ ಕ್ಷೇತ್ರೀಯ ಗ್ರಾಮೀಣ ಬ್ಯಾಂಕುಗಳಿಗೆ 1,748.46 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಕಿರು ಹಣಕಾಸು ಸಂಸ್ಥೆಗಳಿಗೆ 1,185.77 ಕೋಟಿ ರೂ. ಪುನರ್ಧ ನವನ್ನು ರಾಜ್ಯದಲ್ಲಿ ವಿತರಿಸಲಾಗಿದೆ. ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಶೇ.4.5ರ ರಿಯಾಯಿತಿ ಬಡ್ಡಿದರದಲ್ಲಿ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ 5,205.21 ಕೋಟಿ ರೂ.ಅಲ್ಪಾವಧಿ ಪುನರ್ಧ ನವನ್ನು ನಬಾರ್ಡ್‌ನಿಂದ ನೀಡಲಾಗಿದೆ. ಕೃಷಿಯೇತರ ಅಲ್ಪಾವಧಿ ಚಟುವಟಿಕೆಗಳಿಗೆ ರಾಜ್ಯದ 8 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ 646.20 ಕೋಟಿ ರೂ.ಅಲ್ಪಾವಧಿ ಬಹು ಉದ್ದೇಶ ಸಾಲಮಿತಿಗಳನ್ನು ನೇರವಾಗಿ ನೀಡಲಾಗಿದೆ ಎಂದು ಅವರು ಹೇಳಿದರು. ರಾಜ್ಯ ಸರಕಾರ ಹಾಗೂ ರಾಜ್ಯ ಗ್ರಾಮೀಣ ಮತ್ತು ಉಗ್ರಾಣ ಮೂಲಸೌಲಭ್ಯ ನಿಗಮಗಳಿಗೆ 2015-16ರಲ್ಲಿ 761.82 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜ್ಯ ಗೋದಾಮು ನಿಗಮಕ್ಕೆ ಮತ್ತು ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಗೆ 92 ಸ್ಥಳಗಳಲ್ಲಿ 3.20 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ಸಂಗ್ರಹ ಸಾಮರ್ಥ್ಯ ನಿರ್ಮಿಸಲು ಮತ್ತು 119 ಮಾರುಕಟ್ಟೆ ಅಂಕಣಗಳಲ್ಲಿ ಸಂಬಂಧಪಟ್ಟ ಸೌಲಭ್ಯಗಳನ್ನು ಒದಗಿಸಲು ನೀಡಲಾದ 217.02 ಕೊಟಿ ರೂ.ಗಳು ಸೇರಿದೆ ಎಂದು ಎಂ.ಐ.ಗಣಗಿ ತಿಳಿಸಿದರು.

2015-16ರಲ್ಲಿ 89 ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಹಾಗೂ 5 ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳು ಬಹು ಸೇವಾ ಕೇಂದ್ರಗಳಾಗಿ ಪರಿವರ್ತಿಸಿಕೊಳ್ಳಲು 30 ಕೋಟಿ ರೂ., 388 ಸೋಲಾರ್ ಪಂಪ್‌ಸೆಟ್‌ಗಳಿಗೆ 3.77 ಕೋಟಿ ರೂ. ಸಹಾಯಧನ ನೀಡಲಾಗಿದೆ ಎಂದು ಅವರು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ದುರಸ್ಥಿಗಾಗಿ ಮತ್ತು ಶೌಚಾಲಯ ನಿರ್ಮಾಣಕ್ಕಾಗಿ ನಾಲ್ಕು ಜಿಲ್ಲೆಗಳಲ್ಲಿ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲು ಸಂಘಮಿತ್ರ ರೂರಲ್ ಫೈನಾನ್ಸಿಯಲ್ ಸರ್ವಿಸಸ್ ಸಂಸ್ಥೆಗೆ 6 ಕೋಟಿ ರೂ.ಸಾಲ ಮಂಜೂರು ಮಾಡಲಾಗಿದೆ ಎಂದು ಗಣಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕ ಎಲ್.ಆರ್.ರಾಮಚಂದ್ರನ್, ಉಪ ಪ್ರಧಾನ ವ್ಯವಸ್ಥಾಪಕರಾದ ಓ.ಪಿ.ದೋಂಢಿಯಾಲ್, ಪ್ರೇಮಕುಮಾರ್, ಟಿ.ರಮೇಶ್, ವೈ.ಕೆ.ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News