ನಿಯಮ ಉಲ್ಲಂಘಿಸಿ ಮೀಸಲಾತಿ ಪ್ರಕಟ: ರೇವಣ
ಬೆಂಗಳೂರು, ಎ. 15: ಜಿ.ಪಂ ಮತ್ತು ತಾ.ಪಂ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆಡಳಿತ ಪಕ್ಷ ತನ್ನ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಗಾಳಿಗೆ ತೂರಿ ಮೀಸಲಾತಿಯನ್ನು ಪ್ರಕಟಿಸಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಒತ್ತಡಕ್ಕೆ ಮಣಿದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ‘ಮಂಗಳಾರತಿ’ ಕಾದಿದೆ ಎಂದು ಭವಿಷ್ಯ ನುಡಿದರು.
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿರುವ ವಿಚಾರ ಸಂಬಂಧ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಎಚ್.ಕೆ. ಪಾಟೀಲ್ ರಾಜ್ಯದ ಜನತೆ ಕ್ಷಮೆಯಾಚಿಸಬೇಕು. ಈಗಾಗಲೇ ಆಕ್ಷೇಪಣೆಯನ್ನು ಸಲ್ಲಿಸಿದ್ದು, ನ್ಯಾಯ ಯುತವಾಗಿ ಮೀಸಲಾತಿ ನಿಗದಿ ಪಡಿಸಬೇಕೆಂದು ಒತ್ತಾಯಿಸಿದರು.
ಅತಂತ್ರ ಫಲಿತಾಂಶ ಬಂದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಅಧಿಕಾರಕ್ಕೆ ಏರಲು ಮೀಸಲಾತಿಯ ಅಸ್ತ್ರವನ್ನು ಸರಕಾರ ತನ್ನ ಅನುಕೂಲಕ್ಕೆ ತಕ್ಕಂತೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದ ಅವರು, ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನವೇ ಸೂಕ್ತ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ತವರು ಜಿಲ್ಲೆಯಲ್ಲೆ ಮೀಸಲಾತಿ ನಿಯಮ ಉಲ್ಲಂಘಿಸಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸಲಹೆಯನ್ನು ಧಿಕ್ಕರಿಸಿ ಆಡಳಿತ ಪಕ್ಷಕ್ಕೆ ಅನುಕೂಲ ಆಗುವಂತೆ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ರೇವಣ್ಣ ಆಪಾದಿಸಿದರು.