ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪ್ರತಿಷ್ಠಿತ ಟ್ಯುಟೋರಿಯಲ್‌ಗಳ ಮೇಲೆ ಸಿಐಡಿ ದಾಳಿ
ಬೆಂಗಳೂರು, ಎ.15: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಇಂದು ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಪ್ರತಿಷ್ಠಿತ ಟ್ಯುಟೋರಿಯಲ್‌ಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಪ್ರಭಾವಿ ವ್ಯಕ್ತಿಗಳ ಟ್ಯುಟೋರಿಯಲ್‌ಗಳ ಮೇಲೆ ಸಿಐಡಿ ದಾಳಿ ನಡೆಸಿದೆ ಎಂದು ತಿಳಿದುಬಂದಿದ್ದು, ಮೂಲಗಳ ಪ್ರಕಾರ ಬೆಂಗಳೂರಿನ ಹೆಸರಾಂತ 6, ಮಂಗಳೂರು 2, ಬಳ್ಳಾರಿ 2 ಮತ್ತು ತುಮಕೂರಿನಲ್ಲಿ ಒಂದು ಟ್ಯುಟೋರಿಯಲ್ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿವೆ ಎನ್ನಲಾಗಿದೆ.
ಸಿಐಡಿ ಟ್ಯುಟೋರಿಯಲ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಟ್ಯುಟೋರಿಯಲ್‌ನಲ್ಲಿದ್ದ ಕೆಲವು ಲಿಖಿತ ದಾಖಲೆಗಳು ಮತ್ತು ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ, ದಾಳಿಯ ವೇಳೆ ಹಲವರು ಒತ್ತಡ ಹಾಕಿದ್ದರು ಎಂದು ಹೇಳಲಾಗುತ್ತಿದೆ.
ಸಚಿವರೊಬ್ಬರ ವಿಶೇಷಾಧಿಕಾರಿ ಸೇರಿ ಇದುವರೆಗೂ 8 ಮಂದಿಯನ್ನು ಸೋರಿಕೆ ಪ್ರಕರಣದ ಆರೋಪದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ತನಿಖೆಯಲ್ಲಿ ಆರೋಪಿಗಳು ನೀಡಿರುವ ಮಾಹಿತಿಯಂತೆ ಟ್ಯುಟೋರಿಯಲ್‌ಗಳ ಮೇಲೆ ದಾಳಿ ನಡೆಸಲಾಗಿದ್ದು, ಲಭ್ಯವಾಗಿರುವ ದಾಖಲೆಗಳ ಪ್ರಕಾರ ಇನ್ನಷ್ಟು ಮಂದಿಯನ್ನು ವಿಚಾರಣೆಗೊಳಪಡಿಸಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.