×
Ad

15ನೆ ದಿನಕ್ಕೆ ಕಾಲಿಟ್ಟ ಉಪನ್ಯಾಸಕರ ಪ್ರತಿಭಟನೆ

Update: 2016-04-15 23:50 IST

ಬೆಂಗಳೂರು, ಎ.15: ವೇತನ ಹೆಚ್ಚಳಕ್ಕೆ ಆಗ್ರಹಿಸಿ ವೌಲ್ಯಮಾಪನ ಬಹಿಷ್ಕರಿಸಿ ಉಪನ್ಯಾಸಕರು ಹಮ್ಮಿಕೊಂಡಿರುವ ಪ್ರತಿಭಟನೆ 15ನೆ ದಿನಕ್ಕೆ ಕಾಲಿಟ್ಟಿದೆ. ಇನ್ನೊಂದು ಕಡೆ ಉಪನ್ಯಾಸಕರು ಮತ್ತು ಸಚಿವರ ನಡುವಿನ ಸಂಧಾನ ಮಾತುಕತೆ ಪದೇ ಪದೇ ಮುರಿದು ಬೀಳುತ್ತಿದೆ. ಈ ಮೂಲಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ವೇತನ ತಾರತಮ್ಯ ನಿವಾರಣೆ ಹಾಗೂ ಕುಮಾರ್ ನಾಯಕ್ ವರದಿ ಜಾರಿಗೆ ಆಗ್ರಹಿಸಿ ಪಿಯು ಉಪನ್ಯಾಸ ಕರು ವೌಲ್ಯಮಾಪನವನ್ನು ಬಹಿಷ್ಕರಿಸಿ ನಡೆಸುತ್ತಿರುವ ಪ್ರತಿಭಟನೆಗೆ ಖಾಸಗಿ ಅನುದಾನಿತ ಉಪನ್ಯಾಸಕರು ಶುಕ್ರವಾರ ಬೆಂಬಲ ಸೂಚಿಸಿದ್ದಾರೆ.

ಹೀಗಾಗಿ ಪ್ರತಿಭಟನೆಯ ಕಾವು ತೀವ್ರ ಸ್ವರೂಪ ಪಡೆದುಕೊಳ್ಳುವ ಚಿತ್ರಣ ಗೋಚರಿಸುತ್ತಿವೆ. ಎ.15ರಿಂದಲೇ ಪಿಯು ವೌಲ್ಯಮಾಪನ ಆರಂಭಿಸಲಾಗು ವುದು. ವೌಲ್ಯಮಾಪನಕ್ಕಾಗಿ ಬದಲಿ ವ್ಯವಸ್ಥೆ ಮಾಡಿಕೊಳ್ಳ ಲಾಗಿದೆ ಎಂದು ಮಾಧ್ಯಮಗಳ ಮುಂದೆ ನೀಡುತ್ತಿದ್ದ ಶಿಕ್ಷಣ ಸಚಿವರ ಹೇಳಿಕೆ ಶುಕ್ರವಾರ ಹುಸಿಯಾಗಿದೆ. ಈ ಮೂಲಕ ವಿದ್ಯಾರ್ಥಿ ಮತ್ತು ಪೋಷಕರ ಕೆಂಗಣ್ಣಿಗೆ ಸಚಿವರು ಗುರಿಯಾಗಿದ್ದಾರೆ.

ಶುಕ್ರವಾರದಿಂದ ವೌಲ್ಯಮಾಪನದ ಡಿ ಕೋಡಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ, ವೌಲ್ಯಮಾಪನದಲ್ಲಿ 12 ಸಾವಿರ ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ, ಪಲಿತಾಂಶ ಮೇ ಮೊದಲನೆ ವಾರದಲ್ಲಿ ಪ್ರಕಟಿಸಲಾ ಗುವುದು ಎಂದು ಹೇಳಿದ ಸರಕಾರ ಮುಜುಗರಕ್ಕೆ ಒಳಗಾಗಿದೆ. ಇತ್ತ ಪಲಿ ತಾಂಶ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸಾಮಾನ್ಯ ಪ್ರವೇಶ ಪರೀಕ್ಷಾರ್ಥಿ(ಸಿಇಟಿ) ಪಿಯು ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.

ಉಪನ್ಯಾಸಕರು ಅಸ್ವಸ್ಥ: ಕಳೆದ ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಉಪನ್ಯಾಸಕರು ಶುಕ್ರವಾರ ಬಿಸಿಲ ಧಗೆಗೆ ಬಸವಳಿದರು. ರಾಮನಗರ ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಜಾತ ಮತ್ತು ಕೆ.ಆರ್.ಪುರಂ ಕಾಲೇಜಿನ ಉಪನ್ಯಾಸಕ ರಮೇಶ್ ಅಸ್ವಸ್ಥರಾದರು. ಕೂಡಲೆ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸ ಲಾಯಿತು. ಇದುವರೆಗೆ ಅಸ್ವಸ್ಥಗೊಂಡ ಉಪನ್ಯಾಸಕರ ಸಂಖ್ಯೆ ನಾಲ್ಕಕ್ಕೇರಿದೆ.

ರಾಜೀನಾಮೆಗೆ ಒತ್ತಾಯ: ಜೆಡಿಎಸ್‌ನ ಹಿರಿಯ ನಾಯಕ ಎಚ್.ಡಿ. ರೇವಣ್ಣ ಬೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ಪಿಯು ಉಪನ್ಯಾಸಕರ ಮೇಲೆ ಸರಕಾರ ದಬ್ಬಾಳಿಕೆ ಮಾಡುತ್ತಿರುವುದು ಸರಿಯಲ್ಲ. ಕೂಡಲೆ ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ನೀಗಿಸುವಲ್ಲಿ ಸರಕಾರ ವಿಫಲವಾಗಿದೆ. ಉಪನ್ಯಾಸಕರ ಬೇಡಿಕೆ ಈಡೇರಿಸಲು ಸರಕಾರಕ್ಕೆ 250ಕೋಟಿ ರೂ. ಹೆಚ್ಚು ಹೊರೆಯಾಗಲಿದೆ ಎಂಬ ಭ್ರಮೆಯಿಂದ ಹೊರಬಂದು ಅವರ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ಆಗ್ರಹಿಸಿದ ಅವರು, ಶಿಕ್ಷಣ ಇಲಾಖೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ವಿಫಲವಾಗಿರುವ ಕಿಮ್ಮನೆ ರತ್ನಾಕರ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳು ಮೊದಲೆ ಈ ಬಿಕ್ಕಟ್ಟನ್ನು ಬಗೆಹರಿಸಿ ಪ್ರತಿಭಟನೆಗೆ ಅವಕಾಶ ನೀಡಬಾರದಿತ್ತು. ಕೂಡಲೆ ಮುಖ್ಯಮಂತ್ರಿಗಳು ಮಧ್ಯೆ ಪ್ರವೇಶಿಸಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪುನರ್ ಉಚ್ಚರಿಸಿದರು.

ವಿದ್ಯಾರ್ಥಿ ಭವಿಷ್ಯದ ಜೊತೆ ಚೆಲ್ಲಾಟ ಸರಿಯಲ್ಲ

ನಮ್ಮ ಪ್ರತಿಭಟನೆಗೆ ಖಾಸಗಿ ಅನುದಾನಿತ ಉಪನ್ಯಾಸಕರು ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಯಾರು ವೌಲ್ಯ ಮಾಪನದಲ್ಲಿ ಭಾಗಿಯಾಗುತ್ತಿಲ್ಲ. ಸಂಧಾನ ಮಾತುಕತೆ ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಸರಕಾರ ಸದ್ಯ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಉಪನ್ಯಾಸಕರ ಬೇಡಿಕೆ ಈಡೇರಿಸದ ಹೊರತು ಪ್ರತಿಭಟನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಪಿಯು ಉಪನ್ಯಾಸಕರ ಸಂಘದ ಅದ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.

ವೌಲ್ಯ ಮಾಪನ ಪ್ರಕ್ರೀಯೆಯಲ್ಲಿ ಸುಮಾರು ಐದು ವರ್ಷಗಳ ಅನುಭವ ಹೊಂದಿರುವ ಉಪನ್ಯಾಸಕರು ಭಾಗವಹಿಸಬೇಕು. ಆದರೆ ಸರಕಾರ ಅನನುಭವಿಗಳಿಂದ ವೌಲ್ಯಮಾಪನ ಮಾಡಲು ಚಿಂತಿಸಿದೆ ಎಂದು ಆರೋಪಿಸಿದ ಅವರು, ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುವುದು ಸರಿಯಲ್ಲ. ನಮ್ಮ ಬೇಡಿಕೆಗಳನ್ನು ಕೂಡಲೆ ಈಡೇರಿಸಲು ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News