×
Ad

ಬರ ಪೀಡಿತ ಉತ್ತರ ಕರ್ನಾಟಕದ 8 ಜಿಲ್ಲೆಗಳ 40 ಗ್ರಾಮಗಳಿಗೆ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ಪ್ರವಾಸ

Update: 2016-04-16 12:25 IST

ಬೆಂಗಳೂರು, ಎ. 16: ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳ ಶೋಚನೀಯ ಸ್ಥಿತಿಯ ಬಗ್ಗೆ ಸರಕಾರಿ ಮತ್ತು ಖಾಸಗಿ ಮಟ್ಟದಲ್ಲಿ ಯಾರೂ ಗಮನ ಕೊಡದಿರುವುದು ಬಹಳ ಖೇದಕರ ಎಂದು ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ವಿಷಾದ ವ್ಯಕ್ತಪಡಿಸಿದೆ.


ಉತ್ತರ ಕರ್ನಾಟಕದ ಬರ ಪೀಡಿತ 8 ಜಿಲ್ಲೆಗಳ 40 ಗ್ರಾಮಗಳಿಗೆ ತನ್ನ ನೇತೃತ್ವದ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ಕಾರ್ಯದರ್ಶಿ ಮುಹಮ್ಮದ್ ಯೂಸುಫ್ ಕನ್ನಿ, ಉತ್ತರಕರ್ನಾಟಕದಲ್ಲಿ ಬತ್ತಿರುವ ನದಿ, ನಾಲೆ, ಕೆರೆ ಮತ್ತು ಬರಡು ಗದ್ದೆಗಳು ನರಕಸದೃಶ್ಯ ಸನ್ನಿವೇಶವನ್ನು ಸೃಷ್ಟಿಸಿವೆ. ಸಂಕಷ್ಟ ಮತ್ತು ದಿಕ್ಕುತೋಚದ ಜನತೆ ಈಗ ಸರಕಾರ, ಜನ ಪ್ರತಿನಿಧಿ ಮತ್ತು ಅಧಿಕಾರಿಗಳಿಂದ ಯಾವುದೇ ನಿರೀಕ್ಷೆಯನ್ನಿಟ್ಟಿಲ್ಲ ಎಂದರು.


 ಉತ್ತರ ಕರ್ನಾಟಕದಲ್ಲಿ ಭೀಕರ ಬರ ಆವರಿಸಿದರೂ ಇದುವರೆಗೆ ಯಾವುದೇ ಅಧಿಕಾರಿ ಭೇಟಿ ನೀಡಿಲ್ಲ ಮತ್ತು ಯಾವುದೇ ಸರಕಾರಿ ಸೌಲಭ್ಯವನ್ನೂ ನೀಡಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಜನರನ್ನು ಮಾತನಾಡಿಸಿದಾಗ, ನಮ್ಮ ಲೋಕ ಸಭಾ ಸದಸ್ಯರು, ಶಾಸಕರು, ಜಿಲ್ಲಾ ಪಂಚಾಯತ್ ಸದಸ್ಯರು ಯಾರು ಎಂಬುದು ನಮಗೆ ಇದುವರೆಗೂ ತಿಳಿದಿಲ್ಲ ಮತ್ತು ಅವರ ಮುಖವನ್ನೂ ನೋಡಿಲ್ಲ. ಇಲ್ಲಿನ ಹೆಚ್ಚಿನ ಎಲ್ಲ ಕೊಳವೆಬಾವಿಗಳು ಬತ್ತಿಹೋಗಿವೆ, ಹೊಸ ಕೊಳವೆ ಬಾವಿಗಳನ್ನು ಕೊರೆದರೂ 400ರಿಂದ 600 ಅಡಿವರೆಗೆ ನೀರಿನ ಯಾವುದೇ ಸುಳಿವಿಲ್ಲ ಎಂದು ಹೇಳುತ್ತಾರೆ.


ಕೆಲವು ಸ್ಥಳಗಳಿಗೆ ಟ್ಯಾಂಕರ್ ಇತ್ಯಾದಿಗಳ ಮೂಲಕ ನೀರು ಸರಬರಾಜು ಮಾಡಬಹುದಾದರೂ ಇದಕ್ಕೆ ಯಾವುದೇ ಗಮನವನ್ನು ನೀಡಲಾಗುತ್ತಿಲ್ಲ. ಕೆಲವು ಸ್ಥಳಗಳಲ್ಲಿ ಕುಡಿಯಲು ಕನಿಷ್ಠ ನೀರೂ ಲಭ್ಯವಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಕೆರೆಯ ನೀರನ್ನೇ ಕುಡಿಯಲು ಉಪಯೋಗಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಕುಡಿಯಲು 10 ಲೋಟ ನೀರನ್ನು ಸೋಸಿದರೆ ಕಷ್ಟಪಟ್ಟು ಒಂದೆರಡು ಲೋಟ ಕುಡಿಯಲರ್ಹ ನೀರು ದೊರೆಯುತ್ತದೆ. ಇದೇ ರೀತಿ ಸಾಕು ಪ್ರಾಣಿಗಳೂ ಒಂದು ದೊಡ್ಡ ಸಮಸ್ಯೆಯಾಗಿವೆ. ರೈತ ಅಥವಾ ಸಾರ್ವಜನಿಕರು ಪ್ರಾಣಿಗಳನ್ನು ಸಾಕಲು ಸಿದ್ಧರಿಲ್ಲ. ಪ್ರಾಣಿಗಳ ಸಂಖ್ಯೆಯಲ್ಲಿ ಶೇ. 50ರಷ್ಟು ಕಡಿಮೆಯಾಗಿವೆ. ಅನೇಕ ಪ್ರಾಣಿಗಳು ನೀರು ಮತ್ತು ಮೇವು ಸಿಗಲಾರದೆ ಸಾವನ್ನಪ್ಪುತ್ತಿದ್ದರೆ, ಬಹಳಷ್ಟು ಜನರು ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದೇ ರೀತಿ ಶೇ. 75ರಷ್ಟು ಹೈನುಗಾರಿಕೆ ಕಡಿಮೆಯಾಗಿದೆ. ಹಾಲುಕೊಡುವ ಹಸುಗಳಿಲ್ಲದಿದ್ದರೆ ಹಾಲು ಸಿಗುವುದಾದರು ಎಲ್ಲಿಂದ, ತಕ್ಷಣವೇ ಯಾವುದೇ ಪರಿಹಾರ ಕಾರ್ಯ ಕೈಗೊಳ್ಳದಿದ್ದರೆ ಜನರು ಗುಳೇ ಹೋಗುವದರಲ್ಲಿ ಯಾವುದೇ ಸಂಶಯವಿಲ್ಲ. ಆದರೂ ಕೆಲವು ಸ್ಥಳಗಳಲ್ಲಿ ಅಧಿಕಾರಿಗಳು ತಮ್ಮ ವತಿಯಿಂದ ಕೆಲವು ಪರಿಹಾರ ಕಾರ್ಯಗಳನ್ನು ನಡೆಸಿದ್ದಾರೆ. ಕೃಷಿಯೋಗ್ಯವಲ್ಲದ ಎಕರೆ ಜಮೀನಿಗೆ 1,800 ರೂಪಾಯಿ ಸಹಾಯಧನವನ್ನು ಸರಕಾರವು ಘೋಷಿಸಿದೆ ಎಂದು ಭೇಟಿಯ ಸಂದರ್ಭದಲ್ಲಿ ರೈತರು ತಿಳಿಸಿದರು ಎಂದು ಯೂಸುಫ್ ಕನ್ನಿ ಹೇಳಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ಬರಪೀಡಿತ ತಾಲೂಕುಗಳಿಗೆ 50 ಲಕ್ಷ ರೂ. ನೆರವು ಘೋಷಿಸಿದ್ದಾರೆ. ಜೊತೆಗೆ ಈ ಬಗ್ಗೆ ಅಧಿಕಾರಿಗಳಿಗೂ ನಿರ್ದೇಶ ನೀಡಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ಸ್ಪಂದಿಸಿಲ್ಲ. ಇವರು ಸರಕಾರಿ ನೆರವನ್ನು ಸಾರ್ವಜನಿಕರಿಗೆ ತಲುಪಿಸಲು ಉತ್ಸುಕರಾಗಿಲ್ಲ. ಈಗ ಸರಕಾರವು ಸಚಿವರನ್ನೊಳಗೊಂಡ ವಿವಿಧ ತಂಡಗಳನ್ನು ರಚಿಸಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ನಿರ್ಣಯ ಕೈಗೊಂಡಿದೆ. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಮತ್ತು ಅದರಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಅಧಿಕಾರಿಗಳು ಸಚಿವರ ಸ್ವಾಗತ ಮತ್ತು ಸೇವೆಯಲ್ಲಿ ತಮ್ಮ ಸಮಯವನ್ನು ಕಳೆಯಬಹುದು. ಅದರ ಬದಲಾಗಿ ಸರಕಾರವು ಜಿಲ್ಲಾಧಿಕಾರಿ, ತಹಶೀಲ್ದಾರ್, ಪಿಡಿಒಗಳು ಪರಿಹಾರ ಕಾರ್ಯಗಳಿಗೆ ವಿಶೇಷ ಗಮನ ನೀಡಲು ಕಟ್ಟಾಜ್ಞೆ ನೀಡಬೇಕು ಎಂದು ಯೂಸುಫ್ ಕನ್ನಿ ಒತ್ತಾಯಿಸಿದರು.


 ಬರ ಪೀಡಿತ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲ್ಬುರ್ಗಿ, ಯಾದಗಿರಿ, ಗದಗ, ಕೊಪ್ಪಳ ಜಿಲ್ಲೆಗಳಿಗೆ ಭೇಟಿ ನೀಡಿದ ತಂಡದಲ್ಲಿ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮರಕಡ, ಜೊತೆಕಾರ್ಯದರ್ಶಿ ಮುಹಮ್ಮದ್ ಫಾರೂಕ್, ಎಜಾಝ್ ಅಹ್ಮದ್ ಶಿರಹಟ್ಟಿ, ಮುಹಮ್ಮದ್ ಯಾಸೀನ್ ಮಕಾನ್ದಾರ್, ಕೆ.ಐ.ಶೇಖ್, ಮೆಹಬೂಬ್ ಆಲಮ್ ಬಡ್ಗನ್, ಗುಲಾಮ್ ಮುಸ್ತಫಾ ಮತ್ತು ಸಾಲಿಡಾರಿಟಿ ಯೂತ್ ಮೂಮೆಂಟ್‌ನ ಕಾರ್ಯದರ್ಶಿ ನದೀಮ್ ಅಹ್ಮದ್ ಇದ್ದರು.



ಸರಕಾರಕ್ಕೆ ಮನವಿ

1.ಪರಿಹಾರ ಕಾರ್ಯಕ್ಕೆ ಜಿಲ್ಲಾಧಿಕಾರಿ, ತಹಶೀಲ್ದಾರ್, ಪಿಡಿಒ, ಎಇಇ ಮತ್ತು ಇಒ ಅವರನ್ನು ನೇರ ಹೊಣೆಗಾರರಾಗಿ ಮಾಡಬೇಕು. ಕರ್ತವ್ಯ ಲೋಪ ವೆಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

2.ನೀರಿನ ತೀವ್ರ ಅಭಾವವಿರುವ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸುವ ಕಾರ್ಯವನ್ನು ತಕ್ಷಣವೇ ಮಾಡಬೇಕು ಮತ್ತು ಇದರ ಶಾಶ್ವತ ಪರಿಹಾರಕ್ಕಾಗಿ ಸರಕಾರ ಯೋಜನೆಯನ್ನು ರೂಪಿಸಬೇಕು.

3.ಪ್ರತಿ ತಾಲೂಕುಗಳಿಗೆ ತಲಾ 50 ಲಕ್ಷ ರೂ. ನೆರವು ನೀಡುವ ಸರಕಾರದ ಯೋಜನೆಯಲ್ಲಿ ಯಾವುದೇ ಭ್ರಷ್ಟಾಚಾರವಾಗದಂತೆ ನಿಗಾ ವಹಿಸಲು ಸರಕಾರೇತರ ಸಂಸ್ಥೆಗೆ ಹೊಣೆಗಾರಿಕೆ ವಹಿಸಿಕೊಡಬೇಕು ಮತ್ತು ಅವರ ಸಹಕಾರವನ್ನು ಕಡ್ಡಾಯವಾಗಿ ಪಡೆಯಬೇಕು.

4.ಬರಪೀಡಿತ ಪ್ರದೇಶಗಳ ಶಾಸಕರು ಸ್ವಕ್ಷೇತ್ರದಲ್ಲೇ ಇರಲು ತಾಕೀತು ಮಾಡಬೇಕು ಮತ್ತು ಅಗತ್ಯ ಸಂದರ್ಭದಲ್ಲಿ ಅವರನ್ನು ಸಂಪರ್ಕಿಸಲು ಸಾರ್ವಜನಿಕರಿಗೆ ಅವರ ಮೊಬೈಲ್ ಸಂಖ್ಯೆ ಲಭ್ಯವಿರಬೇಕು.

5.ಸಕಾಲದಲ್ಲಿ ಕುಡಿಯುವ ನೀರು ಸಿಗುವಂತಾಗಲು ಬರ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್‌ಚ್ಛಕ್ತಿ 24 ಗಂಟೆ ಲಭ್ಯವಿರುವ ವ್ಯವಸ್ಥೆಮಾಡಬೇಕು.

6.ಕಲುಷಿತಗೊಂಡಿರುವ ಕೆರೆಗಳ ನೀರನ್ನು ಕುಡಿಯುತ್ತಿರುವ ಸ್ಥಳಗಳಲ್ಲಿ ಸೂಕ್ತ ಔಷಧಗಳ ವ್ಯವಸ್ಥೆ ಮಾಡಬೇಕು. ಜೊತೆಗೆ ಈ ಕೆರೆಗಳ ಶುದ್ಧೀಕರಿಸುವ ವ್ಯವಸ್ಥೆಯನ್ನೂ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News