×
Ad

ಕುಮಾರನಾಯಕ್ ವರದಿ ಜಾರಿಯಾಗುವವರೆಗೂ ಧರಣಿ: ಗೋಪಿನಾಥ್

Update: 2016-04-16 16:24 IST

ಬೆಂಗಳೂರು, ಎ.16: ಕುಮಾರನಾಯಕ್ ವರದಿ ಯಥಾವತ್ತಾಗಿ ಜಾರಿಯಾಗುವ ತನಕ ಪಿಯುಸಿ ಮತ್ತು ಎಸೆಸೆಲ್ಸಿ ಉತ್ತರ ಪತ್ರಿಕೆ ವೌಲ್ಯಮಾಪನ ಬಹಿಷ್ಕರಿಸಲು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ತೀರ್ಮಾನಿಸಿದೆ. ಎ. 19ರಿಂದ ನಡೆಯಬೇಕಾಗಿರುವ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ವೌಲ್ಯಮಾಪವನ್ನು ಬಹಿಷ್ಕರಿಸಲು ಸಂಘ ನಿರ್ಧರಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಡಿ.ಸಿ.ಗೋಪಿನಾಥ್, ಬೇಡಿಕೆ ಈಡೇರುವ ತನಕ ಬಹಿಷ್ಕಾರ ಹಿಂಪಡೆಯುವುದಿಲ್ಲ. ರಾಜ್ಯ ಸರಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಅನುದಾನಿತ ಶಾಲಾ ಕಾಲೇಜು ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಕಾಲ್ಪನಿಕ ವೇತನ, ವೈದ್ಯಕೀಯ ವಿಮೆ ಕಲ್ಪಿಸುವುದೂ ಸೇರಿ ಹಲವು ಸೌಲಭ್ಯಗಳನ್ನು ಒದಗಿಸಲು ಸರಕಾರವನ್ನು ಒತ್ತಾಯಿಸುತ್ತಾ ಬರಲಾಗುತ್ತಿದೆ. ಆದರೆ ಸರಕಾರ ಯಾವುದೇ ಸಮಸ್ಯೆಯನ್ನು ಬಗೆಹರಿಸದೆ ಕಾಲಹರಣ ಮಾಡುತ್ತಿದೆ ಎಂದು ಆಪಾದಿಸಿದರು. ಪದವಿಪೂರ್ವ ಕಾಲೇಜು ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಟನೆ ಪದಾಧಿಕಾರಿಗಳು ಉತ್ತರ ಪತ್ರಿಕೆ ವೌಲ್ಯಮಾಪನ ಬಹಿಷ್ಕರಿಸಿ ಕಳೆದ 16 ದಿನಗಳಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಧರಣಿಗೆ ನಮ್ಮ ಬೆಂಬಲವಿದೆ. ಅದೇ ರೀತಿ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಬೇಡಿಕೆಗಳು ಈಡೇರಿಸದಿರುವ ಹಿನ್ನೆಲೆಯಲ್ಲಿ ಎ. 19ರಿಂದ ನಡೆಯಬೇಕಿದ್ದ ಎಸೆಸೆಲ್ಸಿ ಉತ್ತರ ಪತ್ರಿಕೆ ವೌಲ್ಯಮಾಪನವನ್ನು ಬಹಿಷ್ಕರಿಸಲಾಗುತ್ತಿದ್ದು, ಇದಕ್ಕೆ ಎಲ್ಲ ಶಿಕ್ಷಕರೂ ಸಹಕರಿಸಬೇಕು ಎಂದು ಹೇಳಿದರು.
ತಮ್ಮ ಬೇಡಿಕೆ ಈಡೇರುವ ತನಕ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ವೌಲ್ಯಮಾಪನ ಬಹಿಷ್ಕರಿಸುವುದಾಗಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ತಿಳಿಸಿದರು.
ಸರಕಾರದ ಆಮಿಷಕ್ಕೆ ಬಲಿಯಾಗಿ ವೌಲ್ಯಮಾಪನ ಮಾಡುವುದಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಆ ವ್ಯಕ್ತಿ ತೆಗೆದುಕೊಂಡಿರುವ ಏಕಪಕ್ಷೀಯ ನಿಲುವನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ. ಅಷ್ಟೇ ಅಲ್ಲ, ಎಲ್ಲ ಶಿಕ್ಷಕರೂ ಸರಕಾರ ಸಮಸ್ಯೆ ಬಗೆಹರಿಸುವ ತನಕ ಎಸೆಸೆಲ್ಸಿ ಉತ್ತರ ಪತ್ರಿಕೆ ವೌಲ್ಯಮಾಪನ ಬಹಿಷ್ಕರಿಸಬೇಕು ಎಂದು ಮನವಿ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News