ಕಡೂರು ಪುರಸಭೆಗೆ ನೂತನ ಉಪಾಧ್ಯಕ್ಷರ ಅವಿರೋಧ ಆಯ್ಕೆ
ಕಡೂರು, ಎ.16: ಇಲ್ಲಿನ ಪುರಸಭೆಯ ಕನಕ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಪುರಸಭೆಯ ನೂತನ ಉಪಾಧ್ಯಕ್ಷರಾಗಿ ಕೆ.ಎಸ್. ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಎಂ. ಭಾಗ್ಯಾ ಘೋಷಿಸಿದರು.
ಈ ಹಿಂದೆ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದ ಲೋಕೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಮಂಜುನಾಥ್ ಹೊರತಾಗಿ ಬೇರೆ ಯಾರೂ ನಾಮಪತ್ರ ಸಲ್ಲಿಸದೆ ಇದ್ದುದ್ದರಿಂದ ಮಂಜುನಾಥ್ ಆಯ್ಕೆ ಅವಿರೋಧ ಎಂದು ಘೋಷಣೆ ಮಾಡಲಾಯಿತು.
ಈ ಸಂದರ್ಭ ನೂತನ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಪಕ್ಷದ ಹಿರಿಯರ ಒತ್ತಾಸೆಯಿಂದ ತಮಗೆ ಈ ಹುದ್ದೆ ಬಯಸದೇ ಬಂದ ಭಾಗ್ಯವಾಗಿದೆ. ದೊರೆತಿರುವ ಅವಧಿಯಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷೆ ಅನಿತಾ, ಸ್ಥಾಯಿ ಸಮಿತಿಯ ಅಧ್ಯಕ್ಷ ರೇಣುಕಾರಾಧ್ಯ, ಸದಸ್ಯರಾದ ಕೆ.ಎಂ.ಮೋಹನ್‌ಕುಮಾರ್ (ಮುದ್ದು), ಲೋಕೇಶ್, ಎನ್. ಬಷೀರ್‌ಸಾಬ್, ಜಯಣ್ಣ, ಹರೀಶ್, ರವಿಕುಮಾರ್, ಸೋಮಶೇಖರ್, ಸರಸ್ವತಿ, ಜಯಮ್ಮ, ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್. ಚಂದ್ರಪ್ಪ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಆನಂದ್, ಡಿ.ಲಕ್ಷ್ಮಣ್, ಕೆ.ಜಿ. ಲೋಕೇಶ್ ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು.