×
Ad

ಯುವಜನತೆ ಮಾದಕ ವ್ಯಸನಗಳಿಗೆ ಬಲಿಯಾಗದಿರಲಿ: ಆದಿಚುಂಚನಗಿರಿ ಸ್ವಾಮೀಜಿ

Update: 2016-04-16 21:50 IST

ಚಿಕ್ಕಮಗಳೂರು, ಎ.16: ಯುವಜನತೆ ಪ್ರಕೃತಿಗೆ ಅನುಗುಣವಾಗಿ ಬದುಕಿದರೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ. ಮಾದಕ ವ್ಯಸನಗಳಿಗೆ ಬಲಿಯಾದರೆ ದೇಶ ಸಂಕಷ್ಟಗೊಳಗಾಗುತ್ತದೆ. ಯುವಜನತೆ ತಮ್ಮ ಆಹಾರ ಪದ್ಧತಿಯನ್ನು ಪ್ರಕೃತಿಗೆ ಅನುಗುಣವಾಗಿ ರೂಢಿಸಿಕೊಳ್ಳಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾ ನಂದನಾಥಸ್ವಾಮೀಜಿ ಕರೆ ನೀಡಿದರು.

ಅವರು ಶನಿವಾರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕಾಫಿ ಬೆಳೆಗಾರ ಶತಾಯುಷಿ ಎಂ.ಆರ್.ಸಣ್ಣಸಿದ್ದೇಗೌಡರಿಗೆ ನಾಗರಿಕ ಅಭಿನಂದನಾ ಸಮಿತಿಯ ಹಮ್ಮಿಕೊಂಡಿದ್ದ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಣ್ಣಸಿದ್ದೇಗೌಡರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಸಣ್ಣಸಿದ್ದೇಗೌಡರು ಯಾವುದೇ ದುಶ್ಚಟಗಳಿಗೆ ಬಲಿಯಾಗದ ಕಾರಣ ಅವರು 100 ವರ್ಷಗಳ ಕಾಲ ಜೀವಿಸಿ ಈ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ಅವರ ಜೀವನ ಯುವಪೀಳಿ ಗೆಗೆ ಮಾದರಿಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಮಾತನಾಡಿ, ಸಣ್ಣಸಿದ್ದೇಗೌಡರು ಈ ಸಮಾಜಕ್ಕೆ ತಮ್ಮದೇ ಆದ ಹಲವು ಕೊಡುಗೆಗಳನ್ನು ನೀಡುವ ಮೂಲಕ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ. ಯುವಪೀಳಿಗೆ ಕೂಡ ಆದರ್ಶಪುರುಷರ ಬಗ್ಗೆ ಕಾಳಜಿ ವಹಿಸಿ ಅವರಂತೆ ಬದುಕು ಕಟ್ಟಿಕೊಳ್ಳಲು ಬಯಸಬೇಕು ಎಂದು ನುಡಿದರು.

ಚಿಕ್ಕಮಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಟಿ.ಅಂತೋಣಿ ಸ್ವಾಮಿ ಮಾತನಾಡಿ, ಜನಿಸಿದ ಮಗುವಿಗೆ ಉಸಿರು ಇರುತ್ತದೆ.ಆದರೆ ಹೆಸರು ಇರುವುದಿಲ್ಲ. ತನ್ನ ಜೀವಿತಾವಧಿಯಲ್ಲಿ ಒಳ್ಳೆಯ ಕೆಲಸ ಮಾಡಿದ ವ್ಯಕ್ತಿಗೆ ಸಾಯುವಾಗ ಅವರಿಗೆ ಉಸಿರಿರುವುದಿಲ್ಲ. ಆದರೆ ಒಳ್ಳೆಯ ಹೆಸರಿರುತ್ತದೆ. ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕಾಗಿ ಅಹರ್ನಿಶಿ ದುಡಿದ ಸಣ್ಣಸಿದ್ದೇ ಗೌಡರು ಒಬ್ಬರು ಜೀವಂತ ಸಂತ ಎಂದರು.

ನಂತರ ಶಾಸಕ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿದರು. ಮಾಜಿ ಸಚಿವ ಬಿ.ಎಲ್.ಶಂಕರ್ ಅಭಿನಂದನಾನುಡಿಗಳನ್ನು ಸಲ್ಲಿಸಿದರು. ಕಾಫಿ ಬೆಳೆಗಾರ ಗಂಗಯ್ಯಹೆಗ್ಡೆ ಮತ್ತು ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಗೌರಮ್ಮಬಸವೇಗೌಡರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಆದಿಚುಂಚನಗಿರಿ ಶಾಖಾಮಠದ ಸ್ವಾಮೀಜಿಗಳಾದ ಗುಣ ನಾಥಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಅಪ್ಪಾಜಿಗೌಡ, ಎಂಎಲ್‌ಸಿ ಡಾ. ಮೋಟಮ್ಮ, ಎಂ.ಕೆ.ಪ್ರಾಣೇಶ್, ಶೃಂಗೇರಿ ಶಾಸಕ ಜೀವರಾಜ್, ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಕುಮಾರಸ್ವಾಮಿ, ಮಾಜಿ ಸಚಿವರಾದ ಡಿ.ಕೆ.ತಾರಾದೇವಿ, ಡಿ.ಬಿ. ಚಂದ್ರೇಗೌಡ, ಭೇಗಾನೆ ರಾಮಯ್ಯ, ಮಾಜಿ ಶಾಸಕಿ ಗಾಯತ್ರಿಶಾಂತೇಗೌಡ, ನಗರಸಭಾ ಅಧ್ಯಕ್ಷ ದೇವರಾಜ್‌ಶೆಟ್ಟಿ, ಸಿಡಿಎ ಅಧ್ಯಕ್ಷ ಚಂದ್ರೇಗೌಡ, ನಾಗರೀಕ ಅಭಿನಂದನಾ ಸಮಿತಿ ಅಧ್ಯಕ್ಷ ಜೆ.ಪಿ.ಕೃಷ್ಣೇಗೌಡ, ಕಾರ್ಯಾಧ್ಯಕ್ಷ ಬಿ.ಎಲ್.ಸಂದೀಪ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News