ಕಾಂಗೆ್ರಸ್ ಶಾಸಕರ ವಿರುದ್ಧ್ದ ಎಸಿಬಿಗೆ ದೂರು
ಶಿವಮೊಗ್ಗ,ಎ.17: ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್ ಸರ್.ಎಂ.ವಿಶ್ವೇಶ್ವರಯ್ಯ ಸೊಸೈಟಿ ಷೇರುದಾರರಿಗೆ ಯುಗಾದಿ ಹಬ್ಬದ ಶುಭಾಶಯ ಪತ್ರ ರವಾನೆ ಮಾಡುವ ವಿಷಯದಲ್ಲಿ ಆದಾಯ ತೆರಿಗೆ ವಂಚನೆ, ಮುದ್ರಣ ಕಾಯ್ದೆ ನಿಯಮ ಉಲ್ಲಂಘಿಸಿದ್ದಾರೆ. ಭ್ರಷ್ಟಾಚಾರದ ಹಣದಲ್ಲಿ ಪ್ರಚಾರ ನಡೆಸಿದ್ದಾರೆ. ಈ ಕುರಿತಂತೆ ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಆಗ್ರಹಿಸಿ, ಕನ್ನಡ ಸೈನ್ಯ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಸಿ.ಜಯರವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕ್ಕೆ ದೂರು ಸಲ್ಲಿಸಿದ್ದಾರೆ. ಸ್ಥಳೀಯ ಎಸಿಬಿ ಘಟಕದ ಮುಖ್ಯಸ್ಥರಾದ ಡಿವೈಎಸ್ಪಿ ಡಾ. ರಾವ್ ಎಲ್. ಅರೆಸಿದ್ದಿಯವರಿಗೆ ಪಿ.ಸಿ.ಜಯರವರು ಈ ದೂರು ಸಲ್ಲಿಸಿದ್ದಾರೆ. ಈ ದೂರಿನ ಮೇಲೆ ಎಸಿಬಿ ಘಟಕ ಯಾವ ಕ್ರಮಕೈಗೊಳ್ಳಲಿದೆ ಎಂಬುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ. ಆರೋಪವೇನು?: ಸರ್.ಎಂ.ವಿಶ್ವೇಶ್ವರಯ್ಯ ಸೊಸೈಟಿ ಷೇರುದಾರರಿಗೆ ಯುಗಾದಿ ಹಬ್ಬದ ಶುಭಾಶಯ ಕೋರುವ ಸಲುವಾಗಿ ಸರಿಸುಮಾರು 8,500 ಷೇರುದಾರರಿಗೆ ವರ್ಣರಂಜಿತ ಶುಭಾಶಯ ಪತ್ರವನ್ನು ತೆರೆದ ಅಂಚೆಯ ಮೂಲಕ ಕಳುಹಿಸಲಾಗಿದೆ. ಆದರೆ ಸದರಿ ಶುಭಾಶಯ ಪತ್ರದಲ್ಲಿ ಕಡ್ಡಾಯವಾಗಿರಬೇಕಾಗಿದ್ದ ಮುದ್ರಣಗೊಂಡ ಸ್ಥಳ ಹಾಗೂ ಮುದ್ರಕರ ಮಾಹಿತಿಯೇ ಇಲ್ಲವಾಗಿದೆ. ಇದು ಮುದ್ರಣ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ. ಈ ವರ್ಣರಂಜಿತ ಶುಭಾಶಯ ಪತ್ರವೊಂದಕ್ಕೆ ಮುದ್ರಣ, ಅಂಚೆ ವೆಚ್ಚ ಸೇರಿ ಸುಮಾರು 30 ರೂ. ವೆಚ್ಚವಾಗಿದೆ. ಸದರಿ ಸಂಸ್ಥೆಯಲ್ಲಿ 8,500 ಷೇರುದಾರರಿದ್ದಾರೆ. ಇದರ ಆಧಾರದ ಮೇಲೆ ಸರಿಸುಮಾರು 30 ಲಕ್ಷ ರೂ.ವನ್ನು ಶುಭಾಶಯ ಪತ್ರ ಮುದ್ರಣಕ್ಕೆ ವೆಚ್ಚ ಮಾಡಲಾಗಿದೆ. ಇದಕ್ಕೆ ವೆಚ್ಚ ಮಾಡಿದ ಹಣದ ಬಗ್ಗೆ ಸೊಸೈಟಿ ಲೆಕ್ಕ ಪರಿಶೋಧನೆಯಾಗಿಲ್ಲ. ತೆರಿಗೆ ಪಾವತಿಸಿಲ್ಲ. ವಿಶೇಷವಾಗಿ ಪತ್ರಿಕೆಯಲ್ಲಿ ಶಾಸಕರ ಹೆಸರೇ ಮುಖ್ಯವಾಗಿ ಪ್ರಕಟವಾಗಿದ್ದು, ಭ್ರಷ್ಟಾಚಾರದ ಹಣದಲ್ಲಿಯೇ ಮುದ್ರಣ ಮಾಡಲಾಗಿದೆ ಎಂಬುವುದು ಪಿ.ಸಿ.ಜಯರವರ ಆಪಾದನೆಯಾಗಿದೆ. ಶಾಸಕ ಕೆ.ಬಿ.ಪ್ರಸನ್ನಕುಮಾರ್‌ರವರು ಎಸಿಬಿ ಕಾಯ್ದೆ 3(1) ಉಪ ಬಂಧಗಳ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ. ಈ ಶುಭಾಶಯ ಪತ್ರ ರವಾನೆಗೆ ಸಂಬಂಧಿಸಿದಂತೆ ತೆರಿಗೆ ವಂಚನೆ, ಮುದ್ರಣ ಕಾಯ್ದೆ ಉಲ್ಲಂಘನೆ ಪ್ರಕರಣವನ್ನು ಶಾಸಕರ ವಿರುದ್ಧ ದಾಖಲಿಸಬೇಕು. ಹಾಗೆಯೇ ಅಂಚೆ ಇಲಾಖೆಯ ಮೂಲಕ ಅಂಚೆ ವೆಚ್ಚದ ಪರಿಶೀಲನೆ ಕೂಡ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.