‘ಗ್ರಾಮ ಸ್ವರಾಜ್ಯ ನಿರ್ಮಾಣದತ್ತ ಗಮನ ಹರಿಸಬೇಕು’
ಸಾಗರ,ಎ.17: ಶ್ರಮ ಸಂಸ್ಕೃತಿ ಮಾಯವಾಗುತ್ತಿರುವ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಎನ್ನೆಸ್ಸೆಸ್ ಮೂಲಕ ಗ್ರಾಮೀಣ ಭಾಗದಲ್ಲಿ ಶ್ರಮದಾನವನ್ನು ಮಾಡಿ, ಅದರ ಅರಿವು ಹೊಂದುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಎಪಿಎಂಸಿ. ಮಾಜಿ ಅಧ್ಯಕ್ಷ ಈಳಿ ನಾರಾಯಣಪ್ಪ ಹೇಳಿದ್ದಾರೆ.
ತಾಲೂಕಿನ ಈಳಿ-ಹಂದಿಗೋಡಿನಲ್ಲಿ ಎಲ್.ಬಿ. ಮತ್ತು ಎಸ್.ಬಿ.ಎಸ್. ಕಾಲೇಜಿನ ವತಿಯಿಂದ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಏಳು ದಿನಗಳ ವಿಶೇಷ ಎನ್ನೆಸ್ಸೆಸ್ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರ್ರಾಮ ರಾಜ್ಯದಿಂದ ರಾಮರಾಜ್ಯ ನಿರ್ಮಾಣವಾಗುತ್ತದೆ ಎನ್ನುವುದು ಗಾಂಧೀಜಿಯವರ ಕನಸಾಗಿತ್ತು. ಗ್ರಾಮ ಸ್ವರಾಜ್ಯ ನಿರ್ಮಾಣದತ್ತ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಸ್ವಚ್ಛ ಭಾರತ್ ಸೇರಿದಂತೆ ದೇಶದ ಭವಿಷ್ಯವನ್ನು ಇನ್ನಷ್ಟು ಉಜ್ವಲ ಗೊಳಿಸುವ ಶಕ್ತಿ ಯುವ ಸಮುದಾಯಕ್ಕಿದೆ. ಅವರನ್ನು ಆ ಮಾರ್ಗದತ್ತ ಕೊಂಡೊಯ್ಯುವ ಕೆಲಸವನ್ನು ಶಿಕ್ಷಕ ಸಮೂಹ ಹಾಗೂ ಸಮಾಜ ಮಾಡಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಅನೀಲ್ ಒಡೆಯರ್ ಮಾತನಾಡಿ, ವಿದ್ಯಾರ್ಥಿ ಸಮೂಹ ದೇಶದ ಆಸ್ತಿಯಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಸಾಮಾಜಿಕ, ಸಾ
ಂಸ್ಕೃತಿಕ, ಸೇವಾ ಮನೋಭಾವವನ್ನು ಅವರಲ್ಲಿ ಬಿತ್ತಬೇಕು. ನಗರ ಪ್ರದೇಶಗಳಲ್ಲಿ ಓದುವ ವಿದ್ಯಾರ್ಥಿಗಳನ್ನು ಗ್ರಾಮೀಣ ಪ್ರದೇಶಗಳಿಗೆ ಕರೆತಂದು ಇಲ್ಲಿನ ಜನಜೀವನ ಪರಿಚಯಿ ಸಿದಾಗ ಅವರಿಗೆ ಶ್ರಮದ ಮಹತ್ವ ಅರ್ಥವಾಗುತ್ತದೆ ಎಂದು ತಿಳಿಸಿದರು. ತಾಲೂಕು ಪಂಚಾಯತ್ ಸದಸ್ಯ ಕಲಸೆ ಚಂದ್ರಪ್ಪ ಮಾತನಾಡಿ, ಬದುಕಿನ ಅನುಭವ ಪಡೆಯಲು ಎನ್ನೆಸ್ಸೆಸ್ ಸಹಕಾರಿಯಾಗಿದೆ ಸ್ವಯಂ ಪ್ರೇರಣೆಯಿಂದ ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಾಗ ಅವರಲ್ಲಿ ಸಮಾಜಮುಖಿ ಚಿಂತನೆ ಬೆಳೆಯುತ್ತದೆ ಎಂದರು. ಪ್ರಾಚಾರ್ಯ ಡಾ. ಕೆ. ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಕುಮಾರ್, ಮುಖ್ಯ ಶಿಕ್ಷಕಿ ಸೀತಾಬಾಯಿ ಭಟ್, ಉಪನ್ಯಾಸಕರಾದ ಡಾ. ಲಕ್ಷ್ಮೀಶ್, ಡಾ. ಮೂಕಪ್ಪ ನಾಯಕ್, ಪ್ರೊ. ಶ್ರೀಧರರಾವ್, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.