×
Ad

ಸಚಿವರ ಹಾಡಿ ವಾಸ್ತವ್ಯದಿಂದ ಹಲವು ಪ್ರಗತಿ

Update: 2016-04-18 21:59 IST

ಮಡಿಕೇರಿ, ಎ.18 ಸಮಾಜ ಕಲ್ಯಾಣ ಸಚಿವರಾದ ಎಚ್.ಆಂಜನೇಯ ಅವರು 2015ರ ಜನವರಿ 31 ರಂದು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ತಿತಿಮತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡರೇಷ್ಮೆ ಹಡ್ಲು ಗಿರಿಜನ ಹಾಡಿಯಲ್ಲಿ ವಾಸ್ತವ್ಯ ಹೂಡಿದ್ದ ಸಮಯದಲ್ಲಿ ಹಲವು ಮನವಿ ಸ್ವೀಕರಿಸಲಾಗಿತ್ತು. ಈ ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರಕಾರದಿಂದ ಬಿಡುಗಡೆಯಾಗಿರುವ ಒಟ್ಟು 446.25 ಲಕ್ಷ ರೂ. ಗಳಲ್ಲಿ ಕೈಗೊಂಡ ಪ್ರಗತಿ ವಿವರವನ್ನು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಸತೀಶ್ ಅವರು ನೀಡಿದ್ದಾರೆ.

ಕೊಡಗು ಜಿಲ್ಲೆಯ ತಿತಿಮತಿ ಹೋಬಳಿಯಲ್ಲಿ ಹೊಸದಾಗಿ ಪರಿಶಿಷ್ಟ ವರ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ತೆರೆಯಲು ಮಂಜೂರಾತಿ ನೀಡಲಾಗಿದೆ. ಆಶ್ರಮ ಶಾಲೆ/ವಸತಿ ನಿಲಯಗಳ ನವೀಕರಣ, ಹೆಚ್ಚುವರಿ ಕೊಠಡಿ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗಳಿಗೆ ರೂ.710.30 ಲಕ್ಷ ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. (ತಿತಿಮತಿ ಆಶ್ರಮ ಶಾಲೆಗೆ ಅನುದಾನ193.60 ರೂ. ಲಕ್ಷ ಹಾಗೂ ತಿತಿಮತಿ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅನುದಾನ54 ಲಕ್ಷ ರೂ.), ಆಶ್ರಮ ಶಾಲೆಗಳಿಗೆ ಖಾಯಂ ಶಿಕ್ಷಕರ ನೇಮಕಾತಿಗೆ ಸರಕಾರದಿಂದ ಅನುಮೋದನೆ ದೊರೆತಿದ್ದು, ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಹಾಡಿಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೇ 113 ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಕೇವಲ 4 ಅರ್ಜಿಗಳು ಮಾತ್ರ ಬಾಕಿ ಇದೆ. ಈಗಾಗಲೇ ಸರ್ವೆ ಕಾರ್ಯ ನಡೆಸಿ ಬಾಕಿಯಿರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ಕ್ರಮವಹಿಸಲಾಗಿದೆ.

ದೊಡ್ಡರೇಷ್ಮೆ ಹಡ್ಲುಹಾಡಿಗೆ ಅಗತ್ಯವಿರುವ ರಸ್ತೆ ಕಾಮಗಾರಿಗೆ 27 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಕಾಮಗಾರಿಗಳು ಪಂಚಾಯತ್ ಇಂಜಿನಿಯರಿಂಗ್ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಗತಿಯಲ್ಲಿದೆ.

(ಅನುದಾನ 27ಲಕ್ಷ ರೂ.), ದೊಡ್ಡರೇಷ್ಮೆ ಹಡ್ಲು ಹಾಡಿಗೆ ಅಗತ್ಯವಿರುವ ಕುಡಿಯುವ ನೀರಿನ ಕಾಮಗಾರಿಗೆ 8 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಕಾಮಗಾರಿಗಳು ಪಂಚಾಯತ್ ಇಂಜಿನಿಯರಿಂಗ್ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡಿರುತ್ತದೆ. (ಅನುದಾನ 8 ಲಕ್ಷ ರೂ.), ದೊಡ್ಡರೇಷ್ಮೆ ಹಡ್ಲು ಹಾಗೂ ಚಿಕ್ಕರೇಷ್ಮೆ ಹಡ್ಲು ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆ ಕಾಮಗಾರಿಗೆ 25 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಕಾಮಗಾರಿಗಳು ಪಂಚಾಯತ್ ಇಂಜಿನಿಯರಿಂಗ್ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಗತಿಯಲ್ಲಿದೆ. (ಅನುದಾನ 25 ಲಕ್ಷ ರೂ.), ದೊಡ್ಡರೇಷ್ಮೆ ಹಡ್ಲು ಹಾಡಿಯಲ್ಲಿ ವಾಸಿಸುತ್ತಿರುವ ಸುಮಾರು 167 ಕುಟುಂಬಗಳಿಗೆ ಪೌಷ್ಠಿಕಾಂಶ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ಅರಣ್ಯಹಕ್ಕು ಪತ್ರ ಪಡೆದ ಜೇನುಕುರುಬ ಜನಾಂಗದ 49 ಹಾಗೂ ಎರವ ಜನಾಂಗದ 11 ಫಲಾನುಭವಿಗಳಿಗೆ ಮನೆ ಮಂಜೂರು ಮಾಡಲಾಗಿದ್ದು, ಫಲಾನುಭವಿಗಳೇ ಮನೆ ನಿರ್ಮಿಸುತ್ತಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ.

(ಅನುದಾನ 117.25 ಲಕ್ಷ ರೂ.), ದೊಡ್ಡರೇಷ್ಮೆ ಹಡ್ಲು ಹಾಡಿಯ 4 ಫಲಾನುಭವಿಗಳಿಗೆ 70 ಸಾವಿರ ರೂ. ಘಟಕ ವೆಚ್ಚದಲ್ಲಿ ಹಸು ಸಾಕಾಣೆ ಹಾಗೂ 10 ಫಲಾನುಭವಿಗಳಿಗೆ 30 ಸಾವಿರ ರೂ. ಘಟಕ ವೆಚ್ಚದಲ್ಲಿ ಹಂದಿ ಸಾಕಣೆ ಸೌಲಭ್ಯ ಕಲ್ಪಿಸಲಾಗಿದೆ. (ಒಟ್ಟು ರೂ.5.8ಲಕ್ಷ), ಸದರಿ ಹಾಡಿಯಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಚೆಸ್ಕಾಂ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು, ಪ್ರಸ್ತುತ ಹಾಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಟೆಂಡರ್ ಆಹ್ವಾನಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ದೊಡ್ಡರೇಷ್ಮೆ ಹಡ್ಲು ಮತ್ತು ಸುತ್ತಮುತ್ತಲಿನ ಹಾಡಿಗಳಲ್ಲಿ ವಾಸವಿರುವ ನಿವಾಸಿಗಳು ಸ್ವ ಇಚ್ಛೆಯಿಂದ ಅರಣ್ಯದಿಂದ ಹೊರಬರಲು ಇಚ್ಛಿಸಿದ್ದಲ್ಲಿ ಅವರಿಗೆ ನಿವೇಶನ ಒದಗಿಸಿ ಮನೆ ನಿರ್ಮಾಣ ಮಾಡಿಕೊಡಲು ಅರಣ್ಯ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದೊಡ್ಡರೇಷ್ಮೆ ಹಡ್ಲು ಹಾಡಿಯಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು. ದೊಡ್ಡರೇಷ್ಮೆ ಹಡ್ಲು ಹಾಡಿಯಲ್ಲಿ ವಾಸಿಸುತ್ತಿರುವ ಗಿರಿಜನ ವಾಸಿಗಳಿಗೆ ಸೋಲಾರ್ ಹೋಂ ಲೈಟ್‌ಗಳನ್ನು ಒದಗಿಸಲಾಗಿರುತ್ತದೆ. ಅಲ್ಲದೇ, ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿರುತ್ತದೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಸತೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News