×
Ad

ಖಾಸಗಿ ಡೊನೇಶನ್ ನಿಯಂತ್ರಣಕ್ಕೆ ಮನವಿ

Update: 2016-04-18 22:12 IST

ಕಾರವಾರ,ಎ.18: ಡೊನೇಶನ್ ನಿಯಂತ್ರಣಕ್ಕಾಗಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ಕ್ರಿಯಾಶೀಲಗೊಳಿಸಲು ಒತ್ತಾಯಿಸಿ ಸಿಐಟಿಯು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ 2016-17 ನೆ ಸಾಲಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶಾತಿಯ ದಿನಾಂಕವನ್ನು ರಾಜ್ಯ ಸರಕಾರ ಇನ್ನೂ ನಿಗದಿ ಪಡಿಸಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ನೀತಿ-ನಿಯಮಗಳನ್ನು ಮೀರಿ ಡೊನೇಶನ್ ವಸೂಲಿಯಲ್ಲಿ ತೊಡಗಿವೆ ಎಂದು ದೂರಿದ್ದಾರೆ. ಸೀಟುಗಳ ಲಭ್ಯತೆ, ಸಂಗ್ರಹಿಸಬೇಕಾದ ಶುಲ್ಕ, ಪಾಲಿಸಬೇಕಾದ ಮೀಸಲಾತಿ, ನಿಯಮಗಳ ಕುರಿತು ಶಿಕ್ಷಣ ಇಲಾಖೆ ಅನೇಕ ಸುತ್ತೋಲೆ ಹೊರಡಿಸಿದರೂ ಖಾಸಗಿ ಶಾಲೆಗಳು ಎಗ್ಗಿಲ್ಲದೆ ವಸೂಲಿಯಲ್ಲಿ ತೊಡಗುವ ಮೂಲಕ ನಿಯಮಗಳನ್ನು ಉಲ್ಲಂಘಿಸಿ ಆದೇಶಗಳಿಗೆ ಬೆಲೆ ನೀಡದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿವೆ. ಕಾಳ ಸಂತೆಯಲ್ಲಿ ಶಿಕ್ಷಣ ಮಾರಾಟವಾಗುತ್ತಿದ್ದರೂ ಅದನ್ನು ನಿಯಂತ್ರಿಸಬೇಕಾದ ಸರಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಖಂಡನೀಯ.

ಈ ನಿಯಮಗಳ ಪ್ರಕಾರ ಸರಕಾರ ನಿಗದಿಪಡಿಸಿದಂತೆ ಅನುದಾನಿತ ಶಿಕ್ಷಣ ಸಂಸ್ಥೆಗಳು 500 ರೂ. ಅನುದಾನರಹಿತ ಶಿಕ್ಷಣ ಸಂಸ್ಥೆಗಳು ರೂ.600 ವನ್ನು ಮಾತ್ರ ಅಭಿವೃದ್ಧಿ ಶುಲ್ಕ (ಡೆವಲಪ್‌ಮೆಂಟ್ ಫೀ)ನ್ನು ಸಂಗ್ರಹಿಸಲು ಅವಕಾಶವಿದೆ. ಈ ಹಣವನ್ನು ಒತ್ತಾಯದ ಮೂಲಕ ಸಂಗ್ರಹಿಸುವಂತಿಲ್ಲ. ಇದಕ್ಕೂ ಹೆಚ್ಚು ಸಂಗ್ರಹಿಸುವುದು ಕಾನೂನಿನ ಪ್ರಕಾರ ಅಪರಾಧ. ಬೇಡಿಕೆಗಳು: ಡೊನೇಷನ್ ನಿಯಂತ್ರಣಕ್ಕೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ಹಾಗೂ ತಾಲೂಕಾ ಮಟ್ಟದಲ್ಲಿ ತಾಲೂಕಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ಗಳನ್ನು ತಕ್ಷಣ ರಚಿಸಬೇಕು. ವಂತಿಗೆ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರರ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಶಿಕ್ಷಣ ಇಲಾಖೆ ಮುಖ್ಯಸ್ಥರು, ಪಾಲಕರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳ ಜಂಟಿ ಸಭೆಗಳನ್ನು ಕರೆಯಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ರಾಜ್ಯ ಸರಕಾರಕ್ಕೆ ಅಧಿಕಾರವಿರುವ ಕೇಂದ್ರೀಯ ಶಾಸನ ಜಾರಿಗೆ ತರಬೇಕು.

ಸರಕಾರಿ ನಿಯಮದಂತೆ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ವೇತನ ನೀಡಬೇಕು. ಶಿಕ್ಷಣವನ್ನು ಸಾರ್ವತ್ರೀಕರಣ ಮಾಡಿ ಎಲ್ಲರಿಗೂ ಒಂದೆ ಮಾದರಿಯ ಶಿಕ್ಷಣ ಸಿಗುವಂತಾಗಬೇಕು ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಗಣೇಶ ರಾಠೋಡ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News