ಸಮಯಕ್ಕೆ ಸರಿಯಾಗಿ ತೆರೆಯದ ಸರಕಾರಿ ಕಚೇರಿ
ಸೊರಬ,ಎ.18: ನಿಗದಿತ ಸಮಯಕ್ಕೆ ಕಚೇರಿಯೊಂದು ತೆರೆಯದೇ ಇರುವುದನ್ನು ಕಂಡು ಶಾಸಕ ಮಧುಬಂಗಾರಪ್ಪ ಕೆಂಡಾಮಂಡಲರಾಗಿ ತಹಶೀಲ್ದಾರ್ ಕವಿತಾ ಯೋಗಪ್ಪನವರ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆಯಿತು. ರೈತರ ದಿನನಿತ್ಯದ ಕಚೇರಿ ಕೆಲಸಕ್ಕೆ ಸಮಸ್ಯೆಯಾಗುತ್ತಿದೆ. ತಾಲೂಕು ಕಚೇರಿಯ ಕೆಲ ಶಾಖೆಗಳಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಸಾರ್ವಜನಿ ರನ್ನು ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದು ಕೆಡಿಪಿ ಸಭೆಗೆ ಶಾಸಕರು ಆಗಮಿಸುತ್ತಿದ್ದಂತೆ ಸಾರ್ವಜನಿಕರು ಅಳಲು ತೋಡಿಕೊಂಡರು, ತಕ್ಷಣವೇ ಕಾರ್ಯಪ್ರವೃತ್ತರಾದ ಶಾಸಕರು ತಾಲೂಕು ಕಚೇರಿಯಲ್ಲಿನ ನಿಗದಿತ ಸಮಯಕ್ಕೆ ಬೀಗ ತೆರೆಯದ ಹಕ್ಕು ದಾಖಲೆ ಶಾಖೆಗೆ ಭೇಟಿ ನೀಡಿದರು. ಶಾಸಕ ಮಧುಬಂಗಾರಪ್ಪ ಮಾತನಾಡಿ, ಸುಮಾರು ಗಂಟೆ 12 ಆದರೂ ಕಚೇರಿಗಳು ತೆರೆಯದೇ ಇದ್ದರೇ ರೈತರ ಪಾಡೇನು ಎಂದು ಪ್ರಶ್ನಿಸಿದ ಅವರು, ತಕ್ಷಣವೇ ಶಾಖೆ ತೆರೆಯದಿದ್ದಲ್ಲಿ ತನ್ನ ಮೇಲೆ ಕಾನೂನು ಕ್ರಮ ಕೈಗೊಂಡರೂ ಪರವಾಗಿಲ್ಲ, ಬೀಗ ಒಡೆಯುವುದಾಗಿ ತಿಳಿಸಿದರು. ಸ್ಥಳದಲ್ಲಿದ್ದ ತಹಶೀಲ್ದಾರ್ ಕವಿತಾ ಯೋಗಪ್ಪನವರ್ ಕಚೇರಿಯ ಬೀಗ ತೆಗೆಸಿ, ಪಟ್ಟಣದ ಹಕ್ಕು ದಾಖಲೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರವಿ ಹಾಗೂ ಸೋಮಶೇಖರ್ ಈ ಹಿಂದೆ ಕಾರ್ಯನಿರ್ವಹಿಸುವಲ್ಲಿ ಅಮಾನತುಗೊಂಡವರಾಗಿದ್ದು, ಇಲ್ಲಿನ ಕಚೇರಿಯಲ್ಲಿಯೂ ಸಹ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಕುರಿತು ಜಿಲ್ಲಾಧಿ ಕಾರಿಗಳ ಗಮನಕ್ಕೆ ತರುವುದಾಗಿ ಶಾಸಕರಿಗೆ ಮನವರಿಕೆ ಮಾಡಲು ಮುಂದಾದರು. ತಹಶೀಲ್ದಾರ್ ಸಮಜಾಯಿಷಿಗೆ ಮಣಿಯದ ಶಾಸಕರು, ತಕ್ಷಣವೇ ಅಪರ ಜಿಲ್ಲಾಧಿಕಾರಿ ನಾಗರಾಜ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಈ ಹಿಂದೆ ಅಮಾನತುಗೊಂಡವರನ್ನು ಸೊರಬ ಕಚೇರಿಗೆ ನಿಯೋಜನೆ ಮಾಡಿರುವುದರಿಂದ ಸಾರ್ವಜನಿಕರಿಗೆ ಮತ್ತೆ ಸಮಸ್ಯೆಯಾಗುತ್ತಿದೆ. ಇಂತಹ ಅಧಿಕಾರಿಗಳಿಂದ ಸಾರ್ವಜನಿಕ ಕೆಲಸಗಳಿಗೆ ವಿಳಂಬವಾಗುತ್ತಿದ್ದು, ತಕ್ಷಣವೇ ಶಿಸ್ತು ಕ್ರಮ ಕೈಗೊಂಡು ಬೇರೆ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು ಎಂದು ಸೂಚಿಸಿದರು.ಈ ಸಂದಭರ್ದಲ್ಲಿ ತಾಪಂ ಅಧ್ಯಕ್ಷ ಜೈಶೀಲಪ್ಪ ಮತ್ತಿತರರು ಉಪಸ್ಥಿತರಿದ್ದರು.