×
Ad

ಕುದುರೆಮುಖ ಅಭಿವೃದ್ಧಿಗೆ ಎನ್‌ಜಿಒಗಳ ಅಡ್ಡಿ: ಆರೋಪ

Update: 2016-04-18 22:16 IST

ಕಳಸ, ಎ.18: ಕುದುರೆಮುಖ ನಗರದ ಪುರುಜ್ಜೀವನ ಮತ್ತು ಸುತ್ತಮುತ್ತಲ ಹಳ್ಳಿಗಳ ಅಭಿವೃದ್ಧಿಗೆ ಎನ್‌ಜಿಒಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಕುದುರೆಮುಖ ಆಸುಪಾಸಿನ ಗ್ರಾಮಸ್ಥರು, ವಿವಿಧ ಸಂಘಟನೆಗಳು, ಪ್ರಮುಖ ರಾಜಕೀಯ ಪಕ್ಷಗಳು ಕುದುರೆಮುಖದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

 ಕರವೇ ನೆಲ್ಲಿಬೀಡು, ಕನ್ನಡ ಜ್ಯೋತಿ ಯುವಕ ಸಂಘ ನೆಲ್ಲಿಬೀಡು, ನೆಲ್ಲಿಬೀಡು ಸಂರಕ್ಷಣಾ ಸಮಿತಿ, ನವೋದಯ ಯುವಕ ಸಂಘ ಜಾಂಬ್ಳೆ, ಪದ್ಮಾಂಬ ಮಹಿಳಾ ಮಂಡಳಿ ಜಾಂಬ್ಳೆ, ಜಿನವಾಣಿ ಮಹಿಳಾ ಮಂಡಳಿ ನೆಲ್ಲಿಬೀಡು, ಸ್ವ ಸಹಾಯ ಸಂಘಗಳು ನೆಲ್ಲಿಬೀಡು ಜಾಂಬ್ಳೆ, ಕಲಶೇಶ್ವರ ಸ್ವಾಮಿ ಗಿರಿಜನ ಅಭಿವೃದ್ಧಿ ಸಂಘ ಕಳಸ, ರೈತ ಸಂಘಟನೆಗಳು ಹಾಗೂ ಎಲ್ಲ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎನ್‌ಜಿಒಗಳ ವಿರುದ್ಧ ಘೋಷಣೆಯನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿ 2005ರಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಿದರು. ನಂತರ ಕುದುರೆಮುಖ ನಗರವು ಹಾಳು ಕೊಂಪೆಯಂತಾಯಿತು. ಇಲ್ಲಿದ್ದ ಕಾಲೇಜು ಮತ್ತು ಕೆಂೀದ್ರೀಯ ವಿದ್ಯಾಲಯವನ್ನು ಮುಚ್ಚಲಾಯಿತು. ದಿನಗೂಲಿ ನೌಕರರು ಬೀದಿಗೆ ಬಿದ್ದರು. ವ್ಯಾಪಾರ ವಹಿವಾಟು ನಿಂತು ಹೋಯಿತು. ಆಸ್ಪತ್ರೆ ಯಾರ ಪ್ರಯೋಜನಕ್ಕೆ ಬಾರದಂತಾಯಿತು. ಪ್ರತಿ ನಿತ್ಯ ಕುದುರೆಮುಖದಲ್ಲಿ ಅಣ್ಣಂ ಸ್ಟೀಲ್ ಸಂಸ್ಥೆ ಬೃಹತ್ ಕಟ್ಟಡಗಳನ್ನು ನೆಲಸಮ ಮಾಡಲು ಬಳಸುವ ಬಾರಿ ಸ್ಫೋಟಕಗಳನ್ನು ಬಳಸುತ್ತಿದ್ದು, ಇದರಿಂದ ಇಲ್ಲಿಯ ವನ್ಯ ಜೀವಿಗಳಿಗೆ, ಪಶು, ಪಕ್ಷಿಗಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಾನಿಯಾಗುತ್ತಿದೆ. ಬೃಹತ್ ಯಂತ್ರಗಳನ್ನು ಸಾಗಿಸಿ ರಸ್ತೆಗಳು ಶಿಥಿಲಗೊಂಡಿವೆ. ಇದ್ಯಾವುದು ಹುಸಿ ಪರಿಸರವಾದಿಗಳಿಗೆ ನೆನಪಾಗದೆ ಇರುವುದು ಪರಿಸರವಾದಿಗಳ ಇಬ್ಬಗೆ ನೀತಿಯನ್ನು ತೋರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕುದುರೆಮುಖ ಸುತ್ತ-ಮುತ್ತಲಿನ ಗಿರಿಜನ ಗ್ರಾಮಗಳಾದ ಬಿಳಗಲ್, ಈಚಲುಹೊಳೆ, ಕಾರ್ಲೆ, ಕುಚ್ಚಿಗೇರಿ, ಮುತ್ತಿನಕೊಂಡ ರಸ್ತೆಗಳ ಅಭಿವೃದ್ಧಿಗೆ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಲ್ಲಿ ರಸ್ತೆ, ವಿದ್ಯುತ್, ಕುಡಿಯುವ ನೀರು, ಸಮುದಾಯ ಭವನ, ಆಸ್ಪತ್ರೆ, ಶಾಲೆ ಮೊದಲಾದ ಮೂಲಭೂತ ಆವಶ್ಯಕತೆಗಳಿಗೆ ಅರಣ್ಯ ಇಲಾಖೆ ಭೂಮಿ ಒದಗಿಸಲು ಅವಕಾಶ ಇದ್ದರೂ ಕೂಡ ಅನುಮತಿ ನಿರಾಕರಿಸುವ ಮೂಲಕ ಅರಣ್ಯ ಇಲಾಖೆಯೇ ಕಾನೂನು ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಪ್ರಭಾಕರ ಗೌಡ, ತಾಪಂ ಸದಸ್ಯರಾದ ಮುಹಮ್ಮದ್ ರಫೀಕ್, ರಾಜೇಂದ್ರ, ಮೀನಾಕ್ಷಿ, ವಿವಿಧ ಸಂಘಟನೆಗಳ ಮುಖಂಡರಾದ ಸುರೇಶ್ ಭಟ್, ಕಲ್ಕುಳಿ ವಿಠಲ ಹೆಗ್ಡೆೆ, ತೇಜಸ್, ಸೀತಾ, ಗಿರೀಶ್, ಜ್ವಾಲನಯ್ಯ, ಶೇಷಗಿರಿ, ಉಮೇಶ್, ವಿಶ್ವನಾಥ, ಸವಿಂಜಯ, ಮರಿಯಪ್ಪ, ಜಯಂತ್ ಗೌಡ, ವಿಶ್ವನಾಥ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News