ಸಹಾಯಕಿ, ಶಿಕ್ಷಕಿ ವರ್ಗಾವಣೆಗೆ ಒತ್ತಾಯಿಸಿ ಧರಣಿ
ಕಡೂರು, ಎ.18: ಮಕ್ಕಳು ಹಾಗೂ ಗರ್ಭಿಣಿಯರಿಗೆ ನೀಡುವ ಆಹಾರ ಪದಾರ್ಥ ಕಳವು ಮಾಡುತ್ತಿರುವ ಸಹಾಯಕಿ ಹಾಗೂ ಅದಕ್ಕೆ ಸಹಕರಿಸುತ್ತಿರುವ ಅಂಗನವಾಡಿ ಕೇಂದ್ರದ ಶಿಕ್ಷಕಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಕಡೂರು ತಾಲೂಕು ಹಿರೇಗರ್ಜೆ ಗ್ರಾಮಸ್ಥರು ಧರಣಿ ನಡೆಸಿದರು.
ಮಕ್ಕಳು ಹಾಗೂ ಗರ್ಭಿಣಿಯರಿಗೆ ಸರಿಯಾಗಿ ಆಹಾರ ಪದಾರ್ಥ ವಿತರಣೆ ಮಾಡದೆ, ಕಳೆದ ಅನೇಕ ತಿಂಗಳಿನಿಂದ ಗ್ರಾಮದ ಅಂಗನವಾಡಿ ಕೇಂದ್ರದ ಸಹಾಯಕಿ ಭಾರತಿ ಮಕ್ಕಳಿಗೆ ನೀಡಬೇಕಾದ ಆಹಾರ ಪದಾರ್ಥಗಳನ್ನು ಪ್ರತಿದಿನ ಶೌಚಾಲಯದಲ್ಲಿ ಗಂಟು ಕಟ್ಟಿ ಇಟ್ಟು ರಾತ್ರಿ ವೇಳೆ ಮನೆಗೆ ಹೊತ್ತೊಯ್ಯುತ್ತಿದ್ದರು ಎಂದು ಗ್ರಾಮದ ಮುಖಂಡರಾದ ರಂಗನಾಥ್, ಎಚ್.ಆರ್.ಕುಮಾರ್ ಹಾಗೂ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಗಂಗಮ್ಮ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಮುಖಂಡರು ಆರೋಪಿಸಿದರು. ರವಿವಾರ ರಜಾ ದಿನವಾಗಿದ್ದು, ಸಹಾಯಕಿ ಭಾರತಿ ರಾತ್ರಿ ವೇಳೆ ಅಂಗನವಾಡಿ ಕೇಂದ್ರದಿಂದ ಬೆಲ್ಲ, ಅಕ್ಕಿ, ಗೋಧಿ ತುಂಬಿದ ಚೀಲವನ್ನು ಶೌಚಾಲಯದಲ್ಲಿ ಇಟ್ಟಿದ್ದನ್ನು ನೋಡಿದ ಗ್ರಾಮಸ್ಥರು ಶೌಚಾಲಯಕ್ಕೆ ಮತ್ತೊಂದು ಬೀಗ ಹಾಕಿ ಕಾಯುತ್ತಿದ್ದಾಗ ರಾತ್ರಿ 2 ಗಂಟೆಗೆ ಭಾರತಿ ಬೀಗ ತೆಗೆಯಲು ಹೋದ ಸಂದರ್ಭ ಅಲ್ಲೇ ಕಾದು ಕುಳಿತಿದ್ದ ಗ್ರಾಮಸ್ಥರಾದ ರಂಗನಾಥ, ಪ್ರಕಾಶ್, ಸುರೇಶ್ ಮತ್ತಿತರರು ಹಿಡಿದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಮಕ್ಕಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ಇವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಹಿನ್ನೆಲೆಯಲ್ಲಿ ಕಡೂರು ಸಿಡಿಪಿಒ ಕೃಷ್ಣಮೂರ್ತಿ ಸೋಮವಾರ ಹಿರೇಗರ್ಜೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮ್ಮುಖದಲ್ಲಿ ತನಿಖೆ ಆರಂಭಿಸಿ ಶೌಚಾಲಯದಲ್ಲಿದ್ದ ಆಹಾರ ಪದಾರ್ಥವನ್ನು ಸ್ವತಹ ಪರಿಶೀಲಿಸಿ ಸಹಾಯಕಿ ಭಾರತಿಯನ್ನು ತನಿಖೆಗೆ ಬರುವಂತೆ ಹೇಳಿ ಕಳುಹಿಸಿದರೂ ಕೂಡ ಬರಲಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕೂಡಲೇ ಆಕೆಯನ್ನು ಅಮಾನತುಗೊಳಿಸಿ ಎಂದು ಆಗ್ರಹಿಸಿದಾಗ ಅಮಾನತಿಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.