ಕೇಂದ್ರದ ಪಿಎಫ್ ನೀತಿಗೆ ಖಂಡನೆ: ಸಾವಿರಾರು ಕಾರ್ಮಿಕರಿಂದ ಹೆದ್ದಾರಿ ತಡೆದು ಪ್ರತಿಭಟನೆ
ಆನೇಕಲ್, ಎ.18: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಪಿಎಫ್ ನೀತಿಯನ್ನು ಖಂಡಿಸಿ ಬೊಮ್ಮನಹಳ್ಳಿ, ಇಲೆಕ್ಟ್ರಾನಿಕ್‌ಸಿಟಿ, ಬನ್ನೇರುಘಟ್ಟ, ಬೇಗೂರು ಮತ್ತು ಜಿಗಣಿ ಕೈಗಾರಿಕಾ ಪ್ರದೇಶಗಳಲ್ಲಿನ ಗಾರ್ಮೆಂಟ್ಸ್‌ಗಳ ಮಹಿಳಾ ಕಾರ್ಮಿಕರು ಸೇರಿದಂತೆ ಸಾವಿರಾರು ಕಾರ್ಮಿಕರು ಏಕಾಏಕಿ ಇಂದು ಬೆಳಗ್ಗೆ ಬೆಂಗಳೂರು-ಹೊಸೂರು ಹೆದ್ದಾರಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಮಿಕರು, ಹೆದ್ದಾರಿ ತಡೆದು ಎಲ್ಲ ವಾಹನಗಳನ್ನ್ನು ನಿಲ್ಲಿಸಿದರಲ್ಲದೆ, ರಸ್ತೆಯಲ್ಲಿಯೇ ಕುಳಿತು ಕಾರ್ಮಿಕ ವಿರೋಧಿ ನೀತಿಗೆ ಧಿಕ್ಕಾರ ಕೂಗಿದರು. ಸಾವಿರಾರು ಸಂಖ್ಯೆಯಲ್ಲಿದ್ದ ಕಾರ್ಮಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರೂ ಚದುರಿಸಲು ಸಾಧ್ಯವಾಗಲಿಲ್ಲ.
ಸ್ಥಳಕ್ಕೆ ಯಾವೊಬ್ಬ ಜನಪ್ರತಿನಿಧಿ ಮತ್ತು ಅಧಿಕಾರಿಯೂ ಸಂಜೆವರೆಗೂ ಬಾರದೇ ಇದ್ದುದನ್ನು ಗಮನಿಸಿದ ಕಾರ್ಮಿಕರು ಹೆದ್ದಾರಿ ಇಕ್ಕೆಡೆಯ ಬ್ಯಾರಿಕೇಡ್‌ಗಳನ್ನು ಕಿತ್ತುಹಾಕಿದರು, ಟೈರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಮಿತಿ ಮೀರುತ್ತಿದ್ದಂತೆ ಪೊಲೀಸರು ನಡೆಸಿದ ಲಾಠಿ ಚಾರ್ಜ್‌ಗೆ ಹೆದರಿದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದು ಕೂಡಲೇ ಸರಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರು ಸಿಲ್ಕ್ ಬೋರ್ಡ್‌ನಿಂದ ಇಲೆಕ್ಟ್ರಾನಿಕ್‌ಸಿಟಿ ಹಾಗೂ ಬನ್ನೇರುಘಟ್ಟ ಮುಖ್ಯರಸ್ತೆ ತುಂಬಾ ಪ್ರತಿಭಟನೆಯ ಕಾವು ಮುಗಿಲು ಮುಟ್ಟಿದ್ದರಿಂದ ಸಂಜೆಯವರೆಗೂ ಸಂಚಾರಿ ಪೊಲೀಸರು ಕಾರ್ಮಿಕರನ್ನು ತಡೆದು ಪ್ರತಿಭಟನೆಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಬಹುಪಾಲು ಮಹಿಳಾ ಕಾರ್ಮಿಕರೇ ತುಂಬಿದ್ದ ಹೋರಾಟದಲ್ಲಿ ಪುರುಷ ಪೊಲೀಸರು ಏನೂ ಮಾಡದ ಸ್ಥಿತಿಯಲ್ಲಿದ್ದಂತೆ ಕಂಡುಬಂದರು.
ಕೇಂದ್ರದ ಕಾರ್ಮಿಕ ವಿರೋಧಿ ನೀತಿಯಿಂದಾಗಿ ಕಾರ್ಮಿಕರು ಅಂತಿಮವಾಗಿ ಸರಕಾರದಿಂದ ದೊರಕುವ ಪಿಎಫ್‌ಗೆ ಹಂತಹಂತವಾಗಿ ಕತ್ತರಿ ಬೀಳುತ್ತಿರುತ್ತಿದ್ದು, ಕಾರ್ಮಿಕರಿಗೆ ದುಡಿದ ಬೆವರಿನ ಫಲಕ್ಕೂ ಮೋದಿ ಸರಕಾರ ಕತ್ತರಿ ಹಾಕಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಗ್ಯಾಸ್ ಸಬ್ಸಿಡಿ ನೆಪದಲ್ಲಿ ನಮ್ಮ ಮೇಲೆ ಹೆಚ್ಚಿನ ಹೊರೆ ಹಾಕಿ ಬ್ಯಾಂಕ್‌ಗಳ ಉದ್ಧಾರಕ್ಕೆ ನಮ್ಮ ಬಲಿ ನೀಡಿರುವುದಲ್ಲದೆ, ನೇರವಾಗಿ ನಮ್ಮ ಸಂಬಳಕ್ಕೆ ಕತ್ತರಿ ಹಾಕಿರುವುದು ಖಂಡನೀಯ ಎಂದ ಕಾರ್ಮಿಕರು ಮೋದಿ ವಿರುದ್ಧ ಕಿಡಿ ಕಾರಿದರು.
ಇಡೀ ಹೋರಾಟವನ್ನು ನಿಯಂತ್ರಿಸಲು ಪೊಲೀಸರು ಅಲ್ಲಲ್ಲಿ ಲಘು ಲಾಠಿ ಪ್ರಹಾರ ನಡೆಸಿದ್ದು, ಸಂಜೆ 4:30ಗಂಟೆಯ ಹೊತ್ತಿಗೆ ಪೊಲೀಸರ ಮನವಿಗೆ ಸ್ಪಂದಿಸಿದ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟು ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಪ್ರತಿಭಟನೆಯಲ್ಲಿ ಯಾವುದೇ ಕಾರ್ಮಿಕ ಮುಖಂಡರೂ ಭಾಗವಹಿಸದೇ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರೇ ಭಾಗವಹಿಸಿರುವುದು ಕಂಡು ಬಂತು.