ಲ್ಯಾಬ್ ಟೆಂಡರ್ ಕಾನೂನು ಬದ್ಧ: ಡಾ.ಶರಣಪ್ರಕಾಶ್ ಪಾಟೀಲ್
ಬೆಂಗಳೂರು, ಎ.18: ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಖಾಸಗಿ ಸಂಸ್ಥೆ ಪ್ರಾರಂಭಿಸಿರುವ ಪ್ರಯೋಗಾಲಯದ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪದೋಷ ಆಗಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಯೋಗಾಲಯ ಪ್ರಾರಂಭಿಸುವ ಸಂಬಂಧ ನಾಲ್ಕು ಸಂಸ್ಥೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವು. ಅಂತಿಮವಾಗಿ ಕಡಿಮೆ ದರ ನಮೂದು ಮಾಡಿದ ಸಂಸ್ಥೆಗೆ ಟೆಂಡರ್ ನೀಡಲಾಗಿದೆ ಎಂದು ವಿವರಣೆ ನೀಡಿದರು.
ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿನ ಪ್ರಯೋಗಾಲಯ ಕಾನೂನು ಬದ್ಧವಾಗಿದೆ. ಈ ರೀತಿಯ ಪ್ರಯೋಗಾಲಯಗಳನ್ನು ಬೆಂಗಳೂರು, ಶಿವಮೊಗ್ಗ ಹಾಗೂ ಮೈಸೂರು ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಹಿಂದಿನ ಸರಕಾರ ಅನುಮತಿ ನೀಡಿದೆ ಎಂದು ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ರಾಜ್ಯದಲ್ಲಿ ನೂತನ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಬಂದಿಲ್ಲ ಎಂದ ಅವರು, ರಾಜೀವ್ ಗಾಂಧಿ ಆರೋಗ್ಯ ವಿವಿಗೆ ನೂತನ ವೈದ್ಯಕೀಯ ಕಾಲೇಜುಗಳ ಬಗ್ಗೆ ಪರಿಶೀಲನೆ ನಡೆಸಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಸ್ಪಷ್ಟನೆ ನೀಡಿದರು.
ಕಾಯ್ದೆ ಶೀಘ್ರ ಜಾರಿ: ರಾಜ್ಯದಲ್ಲಿ ಶುಶ್ರೂಷಕ ಮಂಡಳಿ ಮತ್ತು ಅರೆ ವೈದ್ಯಕೀಯ ಮಂಡಳಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ಒಗ್ಗೂಡಿಸಿರುವ ‘ಶುಶ್ರೂಷಕ ಪ್ರಾಧಿಕಾರ ಕಾಯ್ದೆ’ಗೆ ನಿಯಮ ರೂಪಿಸಿ ಶೀಘ್ರದಲ್ಲೇ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದುಶರಣ ಪ್ರಕಾಶ ಪಾಟೀಲ್ ತಿಳಿಸಿದರು.
ಶುಶ್ರೂಷಕ ಮಂಡಳಿ ಮತ್ತು ಅರೆ ವೈದ್ಯಕೀಯ ಮಂಡಳಿ ಪ್ರತ್ಯೇಕ ಕಾರ್ಯ ನಿರ್ವಹಣೆ ತಪ್ಪಿಸಲು ಕಳೆದ ಅಧಿವೇಶನದಲ್ಲಿ ಕಾಯ್ದೆ ರೂಪಿಸಲಾಗಿದೆ ಎಂದು ಶರಣ ಪ್ರಕಾಶ ಪಾಟೀಲ ವಿವರಿಸಿದರು.