×
Ad

ಲೋಡ್ ಶೆಡ್ಡಿಂಗ್ ಇಲ್ಲ: ಡಿ.ಕೆ.ಶಿವಕುಮಾರ್

Update: 2016-04-18 23:43 IST

ಬೆಂಗಳೂರು, ಎ.18: ರಾಯಚೂರು ಮತ್ತು ಬಳ್ಳಾರಿ ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ದಾಖಲೆ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿರುವುದರಿಂದ ರಾಜ್ಯದ ವಿದ್ಯುತ್ ವಿದ್ಯುತ್ ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಹೆಸ್ಕಾಂ ವ್ಯಾಪ್ತಿಯ ಎಲ್ಲ ವ್ಯವಸ್ಥಾಪಕ ನಿರ್ದೇಶಕರ ಜೊತೆ ವೀಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯದ ವಿದ್ಯುತ್ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
 ಕಳೆದ ಎರಡು ದಿನಗಳಿಂದ ರಾಯಚೂರಿನ ಆರ್‌ಟಿಪಿಎಸ್ ಹಾಗೂ ಬಳ್ಳಾರಿಯ ಬಿಟಿಪಿಎಸ್ ಘಟಕಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರು ವುದರಿಂದ ಬೇಸಿಗೆಯಲ್ಲಿ ಲೋಡ್‌ಶೆಡ್ಡಿಂಗ್ ಮಾಡುವ ಪ್ರಶ್ನೆಯೆ ಇಲ್ಲ ಎಂದು ಅವರು ಹೇಳಿದರು.
ಆರ್‌ಟಿಪಿಎಸ್‌ನಲ್ಲಿ ಕಳೆದ 25 ವರ್ಷಗಳಲ್ಲೆ ದಾಖಲೆ ಪ್ರಮಾಣದಲ್ಲಿ ಶೇ.100.75 ರಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಎಲ್ಲ 8 ಘಟಕಗಳು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿವೆ. ಬಿಟಿಪಿಎಸ್ ಘಟಕಗಳೂ ಶೇ.80ರಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿವೆ ಎಂದು ಅವರು ವಿವರಣೆ ನೀಡಿದರು.
ಆರ್‌ಟಿಪಿಎಸ್ ಹಾಗೂ ಬಿಟಿಪಿಎಸ್ ಘಟಕಗಳಿಗೆ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆ ಇಲ್ಲ. ಆದರೆ, ಈ ಘಟಕಗಳನ್ನು ತಂಪುಗೊಳಿಸಲು ನೀರಿನ ಕೊರತೆ ಎದುರಾಗಿದೆ. ಆರ್‌ಟಿಪಿಎಸ್‌ನಲ್ಲಿ 20 ಹಾಗೂ ಬಿಟಿಪಿಎಸ್‌ನಲ್ಲಿ 50 ದಿನಗಳಿಗಾಗುವಷ್ಟು ನೀರಿನ ಸಂಗ್ರಹವನ್ನು ಇಟ್ಟುಕೊಳ್ಳಲಾಗಿದೆ ಎಂದು ಶಿವಕುಮಾರ್ ಹೇಳಿದರು.
ನಾರಾಯಣಪುರ ಹಾಗೂ ತುಂಗಾಭದ್ರಾ ಜಲಾಶಯಗಳಿಂದ ಈ ಘಟಕಗಳಿಗೆ ನೀರು ಹರಿಸಲು ಕೃಷ್ಣಾ ನೀರಾವರಿ ನಿಗಮಕ್ಕೆ ಮನವಿ ಮಾಡಲಾಗಿದೆ. ಆರ್‌ಟಿಪಿಎಸ್ ಹಾಗೂ ಬಿಟಿಪಿಎಸ್‌ಗಳಿಗೆ ನೀರು ಪೂರೈಸುವ ನದಿ ಪಾತ್ರದ ಪಂಪ್‌ಸೆಟ್‌ಗಳಿಗೆ ತಾತ್ಕಾಲಿಕವಾಗಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂಬಂಧ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದು, ರೈತರಿಗೂ ಸಹಕರಿಸುವಂತೆ ಮನವಿ ಮಾಡಲಾಗಿದೆ. ಆದರೆ ರಾಜ್ಯದ ಬೇರೆ ಭಾಗಗಳಲ್ಲಿನ ಪಂಪ್‌ಸೆಟ್‌ಗಳಿಗೆ 3 ಫೇಸ್‌ನಲ್ಲಿ 6 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಳೆದ ವರ್ಷ ಇದೇ ಅವಧಿಗೆ 179 ದಶಲಕ್ಷ ಯೂನಿಟ್ ವಿದ್ಯುತ್ ಬೇಡಿಕೆ ಇತ್ತು. ಆದರೆ, ಈ ಬಾರಿ 210 ದಶಲಕ್ಷ ಯೂನಿಟ್ ಬೇಡಿಕೆ ಇದೆ. ಈ ಪೈಕಿ 203 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಕಳೆದ ಸಾಲಿಗಿಂತ 114 ದಶಲಕ್ಷ ಯೂನಿಟ್ ಹೆಚ್ಚುವರಿ ವಿದ್ಯುತ್ ಪೂರೈಕೆ ಮಾಡುವಲ್ಲಿ ಇಂಧನ ಇಲಾಖೆ ಯಶಸ್ವಿಯಾಗಿದೆ ಎಂದು ಅವರು ಶಿವಕುಮಾರ್ ಹೇಳಿದರು.
ವಿದ್ಯುತ್ ಖರೀದಿ: ಮಧ್ಯಮಾವಧಿ ಟೆಂಡರ್ ಮೂಲಕ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೆಕ್ಷನ್ 11ರ ಅಡಿಯಲ್ಲಿ ಈಗ ಖರೀದಿಸುತ್ತಿರುವ 450 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಲ್ಲೂ ಜೂನ್ ವೇಳೆಗೆ ವ್ಯತ್ಯಯ ಆಗುವ ಸಾಧ್ಯತೆ ಇರುವುದರಿಂದ ಮಧ್ಯಮಾವಧಿ ಟೆಂಡರ್ ಕರೆಯಲಾಗಿದೆ ಎಂದು ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ಸೆಕ್ಷನ್11ರ ಅಡಿಯಲ್ಲಿ 450 ಮೆಗಾವ್ಯಾಟ್, ಮಹಾರಾಷ್ಟ್ರದಿಂದ 250 ಮೆಗಾವ್ಯಾಟ್, ಅಲ್ಪಾವಧಿ ಟೆಂಡರ್‌ನಿಂದ 750 ಮೆಗಾವ್ಯಾಟ್, ದಾಮೋದರ್ ವ್ಯಾಲಿಯಿಂದ 450 ಮೆಗಾವ್ಯಾಟ್, ಕೇಂದ್ರ ಸರಕಾರದಿಂದ ಹೆಚ್ಚುವರಿಯಾಗಿ 250 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ ಅವರು ತಿಳಿಸಿದರು.
ಶರವಾತಿ ಜಲ ವಿದ್ಯುತ್ ಉತ್ಪಾದನಾ ಘಟಕಗಳ ಪೈಕಿ 3 ಘಟಕಗಳು ಉತ್ಪಾದನೆ ಆರಂಭಿಸಿದ್ದು, ಜೂನ್ ವೇಳೆಗೆ ಇನ್ನೂ 7 ಘಟಕಗಳಲ್ಲಿ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ವಿವರಿಸಿದರು.
ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆಗೆ ಯಾವುದೇ ಅಡ್ಡಿ ಇಲ್ಲ. ಕೆಲವರು ತಮ್ಮ ಮನೆಗಳ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿಕೊಂಡು ಸರಕಾರದಿಂದ ಸಹಾಯಧನವನ್ನು ಪಡೆಯಲು ಯತ್ನಿಸಿದ್ದ ಸಂಗತಿಗಳು ನಮ್ಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಂತಹ ಪ್ರಕರಣಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಕುಡಿಯುವ ನೀರಿಗೆ ಆದ್ಯತೆ: ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಿದರೆ 24 ಗಂಟೆಯೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ವಿಶೇಷ ಆದೇಶ ಹೊರಡಿಸಲಾಗಿದೆ. ಗ್ರಾಮ ಪಂಚಾಯತ್‌ಗಳು ಶುಲ್ಕ ಪಾವತಿಸದಿದ್ದರೂ ಸಂಪರ್ಕ ಕಲ್ಪಿಸಲಾಗುವುದು. ಆನಂತರ ಶುಲ್ಕವನ್ನು ಭರಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರೈತ ಸೂರ್ಯ ಯೋಜನೆಯ ವಿದ್ಯುತ್‌ಗೆ ಪ್ರತಿಯೂನಿಟ್‌ಗೆ 5.50 ರೂ.ದರ ನಿಗದಿ ಮಾಡಲಾಗಿದೆ. ಈ ಯೋಜನೆಗೆ 60 ತಾಲೂಕುಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಈಗಾಗಲೇ 48 ತಾಲೂಕುಗಳ ವ್ಯಾಪ್ತಿಯಲ್ಲಿ ವಿದ್ಯುತ್ ಉತ್ಪಾದನೆಗೆ ಅನುಮತಿ ನೀಡಲಾಗಿದೆ. 12 ತಾಲೂಕುಗಳ ಟೆಂಡರ್ ರದ್ದು ಮಾಡಲಾಗಿದ್ದು, ಹೊಸದಾಗಿ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.
ಪಾವಗಡ ಸೌರ ವಿದ್ಯುತ್ ಪಾರ್ಕ್ ಯೋಜನೆಗೆ 8 ಸಾವಿರ ಎಕರೆ ಭೂಮಿಯನ್ನು ಪರಿವರ್ತಿಸಿ ನೋಂದಣಿ ಮಾಡಿಸಲಾಗಿದೆ. ಇನ್ನೂ 4 ಸಾವಿರ ಎಕರೆ ಭೂಮಿಯನ್ನು ಶೀಘ್ರದಲ್ಲೇ ನೋಂದಣಿ ಮಾಡಲಾಗುವುದು. ಮುಂದಿನ ಸಾಲಿನ ಮಾರ್ಚ್ ವೇಳೆಗೆ ಈ ಘಟಕ ಉತ್ಪಾದನೆ ಆರಂಭಿಸಲಿದೆ ಎಂದು ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News