ಜಾಲ ಹಳ್ಳಿಯಲ್ಲಿ ಮೂರು ಬಸ್‌ಗಳಿಗೆ ಬೆಂಕಿ; ಯುವತಿಯೊಬ್ಬಳಿಗೆ ಗುಂಡು
ಬೆಂಗಳೂರು, ಎ.19: ಕೇಂದ್ರ ಸರಕಾರದ ನೂತನ ಪಿ.ಎಫ್ ನೀತಿಯನ್ನು ವಿರೋಧಿಸಿ ಗಾರ್ಮೆಂಟ್ಸ್ ಕಾರ್ಮಿಕರು ಬೆಂಗಳೂರಿನಲ್ಲಿ ಇಂದು ಮತ್ತೆ ಬೀದಿಗಿಳಿದು ನಡೆಸಿದ ಪ್ರತಿಭಟನೆಯು ಹಿಂಸೆಗೆ ತಿರುಗಿದ್ದು, ಪ್ರತಿಭಟನೆಕಾರರನ್ನು ಚದುರಿಸಲು ಪೊಲೀಸರು ಹಾರಿಸಿದ ಗುಂಡು ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಗಾಯಗೊಳಿಸಿದ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಬಳಿ ನಡೆದಿದೆ.
ಗಾರೆಬಾವಿ ಪಾಳ್ಯ ಸಮೀಪದ ಲಕ್ಷ್ಮೀ ಲೇಔಟ್ ನಿವಾಸಿ ಪ್ರೀತಿ ಜಿ.ಎನ್(18) ಗಾಯಗೊಂಡ ಯುವತಿ. ಪ್ರೀತಿ ಕಾಲೇಜಿನಿಂದ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಪೊಲೀಸರ ಅಚಾತುರ್ಯದಿಂದ ಈ ಘಟನೆ ಸಂಭವಿಸಿದ್ದು, ಗಾಯಗೊಂಡ ಯುವತಿಯನ್ನು ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುಷ್ಕರ್ಮಿಗಳು ಹೆಬ್ಬಗೋಡಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಹಲ್ಲೆ ನಡೆಸಿದ್ದಾರೆ.ಪೊಲೀಸ್ ಠಾಣೆಗೆ ನುಗ್ಗಿದ ದುಷ್ಕರ್ಮಿಗಳನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದಾಗ ಠಾಣೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಗುಂಡು ತಗಲಿದೆ ಎಂದು ತಿಳಿದು ಬಂದಿದೆ.
ದುಷ್ಕರ್ಮಿಗಳು ಜಾಲಹಳ್ಳಿ ಕ್ರಾಸ್‌ನಲ್ಲಿ ಮೂರು ಬಸ್‌ಗಳಿಗೆ ಬೆಂಕಿ ಹಚ್ಚಿ ಧಾಂದಲೆ ನಡೆಸಿದ್ದಾರೆ. ಹಿಂಸಾಚಾರಕ್ಕೆ ಇಳಿದ ಪ್ರತಿಭಟನೆಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿ , ಲಾಠಿ ಚಾರ್ಜ್ ನಡೆಸಿದರು.
62 ಮಂದಿ ಗಾಯ:ಹಿಂಸಾಚಾರದಲ್ಲಿ ಒಟ್ಟು 62 ಮಂದಿ ಗಾಯಗೊಂಡಿದ್ದಾರೆ. ಎಸಿಪಿ ಓಬಲೇಶ್ ಸೇರಿದಂತೆ 24 ಪೊಲೀಸರಿಗೆ ಗಾಯವಾಗಿದೆ.