×
Ad

ಖಾಝಿಗಳಿಗೆ ಧಾರ್ಮಿಕ ನ್ಯಾಯಾಧೀಶರ ಸ್ಥಾನಮಾನ ಕಲ್ಪಿಸಲಾಗಿದೆ: ಪ್ರೊ.ಅಲಿಕುಟ್ಟಿ ಮುಸ್ಲಿಯಾರ್

Update: 2016-04-19 21:50 IST

ಮೂಡಿಗೆರೆ, ಎ.19: ಇಸ್ಲಾಮ್‌ನ ಧಾರ್ಮಿಕ ವಿಧಿವಿಧಾನಗಳನ್ನು ಒಳಗೊಂಡ ಚೌಕಟ್ಟು ಭಾರತದ ಸಂವಿಧಾನವನ್ನೇ ಹೋಲುತ್ತದೆ. ಮಹಾರಾಜರ ಆಳ್ವಿಕೆಗಳಿರುವ ದೇಶಗಳಲ್ಲಿ ಖಾಝಿ ಸ್ಥಾನವನ್ನು ರಾಜರುಗಳೇ ನಿಭಾಯಿಸುತ್ತಾರೆ. ರಾಜರು ಇಲ್ಲದ ಪ್ರದೇಶಗಳಲ್ಲಿ ಖಾಝಿಗಳನ್ನು ನಿಯೋಜಿಸಿ ಧಾರ್ಮಿಕ ನ್ಯಾಯಾಧೀಶರ ಸ್ಥಾನಮಾನವನ್ನು ಕಲ್ಪಿಸಲಾಗಿದೆ ಎಂದು ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ವಿಧ್ವಾಂಸ ಶೈಖುನಾ ಅಲ್‌ಹಾಜ್ ಪ್ರೊ.ಅಲಿಕುಟ್ಟಿ ಮುಸ್ಲಿಯಾರ್ ತಿಳಿಸಿದ್ದಾರೆ. ಅವರು ಮಂಗಳವಾರ ರೈತಭವನದಲ್ಲಿ ಸಂಯುಕ್ತ ಜಮಾತ್ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಖಾಝಿ ಪದಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಸ್ಲಾಂ ಶರೀಯತ್ ವೈಯಕ್ತಿಕ ಕಾನೂನು ಮೂಲಕ ಶರೀಯತ್‌ನ ಸಂವಿಧಾನಕ್ಕೆ ಬದ್ಧರಾಗಿ ಖಾಝಿಗಳು ತೀರ್ಮಾನ ತೆಗೆದುಕೊಂಡರೆ ಅದನ್ನು ಪ್ರಶ್ನಿಸಲು ಇಸ್ಲಾಮ್ ವೈಯಕ್ತಿಕ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಎಲ್ಲಾ ರೀತಿಯಲ್ಲೂ ಅಳೆದೂ ತೂಗಿ ತೀರ್ಮಾನ ತೆಗೆದುಕೊಳ್ಳುವ ಪರಮಾಧಿಕಾರ ಖಾಝಿಯವರಿಗೆ ಇದೆ ಎಂದು ವಿವರಿಸಿದರು.

ವಿವಾಹ ವಿಚ್ಛೇದನದಂತಹ ಹಾಗೂ ಅನಾಥ ಹೆಣ್ಣುಮಕ್ಕಳ ವಿವಾಹದ ಉಸ್ತುವಾರಿ ಬಗೆಹರಿಸಲು ಅಸಾಧ್ಯವಾದ ವ್ಯಾಜ್ಯ, ಮಸೀದಿ ಮತ್ತು ಮದರಸಗಳ ಉಸ್ತುವಾರಿ, ಧಾರ್ಮಿಕ ಗುರುಗಳ ನೇಮಕ, ರಂಝಾನ್, ಬಕ್ರೀದ್ ಸಹಿತ ಹಲವು ಹಬ್ಬಗಳ ಆಚರಣಾ ದಿನಾಂಕ ನಿಗದಿ ಸಹಿತ ಹಲವು ತೀರ್ಮಾನವನ್ನು ತೆಗೆದುಕೊಳ್ಳುವ ಅಧಿಕಾರ ಖಾಝಿಯವರಿಗಿದೆ. ಮಲೇಷ್ಯಾ, ಇಂಡೋನೇಷ್ಯಾ, ಥೈಲ್ಯಾಂಡ್ ಸಹಿತ ಹಲವು ದೇಶಗಳಲ್ಲಿ ಖಾಝಿಗಳನ್ನು ನೇಮಿಸಲಾಗಿದೆ. ಇನ್ನೂ ಕೆಲವು ದೇಶಗಳಲ್ಲಿ ರಾಜರ ಆಳ್ವಿಕೆಯಿದೆ. ಭಾರತದಲ್ಲೂ ಕರ್ನಾಟಕ, ಕೇರಳ ಸಹಿತ ಇತರ ರಾಜ್ಯಗಳಲ್ಲಿ ಖಾಝಿಗಳು ಅಧಿಕಾರದಲ್ಲಿದ್ದಾರೆ. ನೂತನ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ ಶೈಖುನಾ ಅಲ್‌ಹಾಜ್ ಎಂ.ಎ.ಖಾಸಿಂ ಮುಸ್ಲಿಯಾರ್ ಮಾತನಾಡಿ, ತಮ್ಮನ್ನು ಖಾಝಿಯಾಗಿ ನೇಮಿಸಿದ್ದು ಸಂತಸ ತಂದಿದೆ. ಈ ಭಾಗದ ಜನರ ಹಾಗೂ ಇಸ್ಲಾಮ್ ಶರೀಯತ್‌ನ ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ಅಧಿಕಾರಕ್ಕಿಂತ ಎಲ್ಲರನ್ನೂ ಒಟ್ಟುಗೂಡಿಸಿ ಸಮುದಾಯದ ಧಾರ್ಮಿಕ ಅಭಿವೃದ್ಧಿ ಜೊತೆಗೆ ಇತರ ವರ್ಗಗಳನ್ನು ಸೌಹಾರ್ದತೆಯಿಂದ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ತಮಗೆ ಸಿಕ್ಕಿದೆ. ತಾವು ಎಲ್ಲೂ ಚೌಕಟ್ಟು ಬಿಡದೆ ಜವಾಬ್ದಾರಿ ನಿಭಾಯಿಸುವುದಾಗಿ ತಿಳಿಸಿದರು.

ಉಸ್ತುವಾರಿ ಖಾಝಿಯಾಗಿದ್ದ ಎನ್.ಪಿ.ಎಂ.ಝೈನುಲ್ ಆಬಿದೀನ್ ತಂಙಳ್ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಪಿನಂಗೋಡ್ ಅಬೂಬಕರ್ ಮುಸ್ಲಿಯಾರ್ ವಹಿಸಿದ್ದರು. ಈ ವೇಳೆ ಕೊಪ್ಪ ಖಾಝಿ ಅಬೂಬಕರ್ ಮುಸ್ಲಿಯಾರ್, ಪಿ.ಕೆ.ಅಬೂಬಕರ್ ಮುಸ್ಲಿಯಾರ್ ಬಂಬ್ರಾಣ, ಯು.ಕೆ.ಅಬ್ದುಲ್ ಅಝೀಝ್ ದಾರಿಮಿ, ಅಬ್ದುಲ್ ಖಾದರ್ ದಾರಿಮಿ, ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಕೆ.ಮುಹಮ್ಮದ್, ಸಂಯುಕ್ತ ಜಮಾತ್ ಅಧ್ಯಕ್ಷ ಚಕ್ಕಮಕ್ಕಿ ಅಬ್ಬಾಸ್ ಹಾಜಿ, ಕಾರ್ಯದರ್ಶಿ ಹನೀಫ್ ಹಾಜಿ, ಸ್ವಾಗತ ಸಮಿತಿ ಅಧ್ಯಕ್ಷ ಅಕ್ರಮ್ ಹಾಜಿ, ಸಿ.ಕೆ.ಇಬ್ರಾಹೀಂ ಹಾಜಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಸದಸ್ಯ ಕಿರುಗುಂದ ಅಬ್ಬಾಸ್, ಎ.ಸಿ.ಅಯೂಬ್ ಹಾಜಿ, ಬಿ.ಎಚ್.ಮುಹಮ್ಮದ್, ಹಮಬ್ಬ, ಶರೀಫ್, ಫಿಶ್‌ಮೋಣು, ಗಬ್ಗಲ್ ನಝೀರ್ ಹಾಜಿ, ಹಂಝ ಮುಸ್ಲಿಯಾರ್, ಇಸಾಕ್ ಭೂತನಕಾಡು, ಹಾಜಬ್ಬ, ಹಮೀದ್ ಕಳಸ, ಮಾಜಿ ಜಿಪಂ ಸದಸ್ಯ ಅಬ್ದುಲ್ ಕರೀಂ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News