×
Ad

ಮಕ್ಕಳ ಪ್ರತಿಭೆ ಗುರುತಿಸಲು ಬೇಸಿಗೆ ಶಿಬಿರ ಸಹಕಾರಿ: ನಾ.ಡಿಸೋಜ

Update: 2016-04-19 21:56 IST

ಸಾಗರ, ಎ. 19: ಮಕ್ಕಳಲ್ಲಿರುವ ಪ್ರತಿ ಭೆಗೆ ಒರೆ ಹಚ್ಚುವ ಕೆಲಸವನ್ನು ಬೇಸಿಗೆ ಶಿಬಿರಗಳು ಮಾಡುತ್ತವೆ. ಬೇಸಿಗೆ ರಜೆ ಸಂದರ್ಭದಲ್ಲಿ ಮಕ್ಕಳನ್ನು ಇಂತಹ ಶಿಬಿರಗಳಿಗೆ ಕಳುಹಿಸುವುದರಿಂದ ಅವರಲ್ಲಿನ ಕ್ರಿಯಾಶೀಲತೆ ಹೆಚ್ಚುತ್ತದೆ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು.

ಇಲ್ಲಿನ ಕಾಗೋಡು ತಿಮ್ಮಪ್ಪ ರಂಗ ಮಂದಿರದಲ್ಲಿ ಸ್ಪಂದನ ರಂಗ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.

ರಂಗಭೂಮಿ ಮಕ್ಕಳಿಗೆ ಬದುಕುವ ರೀತಿಯನ್ನು ತಿಳಿಸಿಕೊಡುತ್ತದೆ. ಜೀವನಕ್ಕೆ ಹತ್ತಿರವಾದ ಅಂಶಗಳನ್ನು ರಂಗಭೂಮಿಯ ಮೂಲಕ ಮಾತ್ರ ಕಲಿಯಬಹುದು. ಈ ನಿಟ್ಟಿನಲ್ಲಿ ಬೇಸಿಗೆ ಶಿಬಿರಗಳಲ್ಲಿ ಇತರ ಚಟುವಟಿಕೆಗಳ ಜೊತೆಗೆ ರಂಗಭೂಮಿ ಕುರಿತು ಅರಿವು ಮೂಡಿಸುವುದು ಗಮನಾರ್ಹ ಸಂಗತಿ ಎಂದರು. ಲೇಖಕಿ ಎಸ್. ಮಾಲತಿ ಮಾತನಾಡಿ, ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಅಲ್ಲಿ ಸದ್ವಿಚಾರಗಳನ್ನು ಬಿತ್ತಬೇಕು. ಬದಲಾದ ದಿನಮಾನಗಳಲ್ಲಿ ನಡೆಯುತ್ತಿರುವ ಘಟನಾವಳಿಗಳು ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ಅವಕಾಶ ಮಾಡಿಕೊಂಡದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದೆ. ಇಂತಹ ಶಿಬಿರಗಳು ಈ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರಯೋಗ ಅನುಕರಣೀಯವಾದದ್ದು ಎಂದರು. ವೇದಿಕೆಯಲ್ಲಿ ಸ್ಪಂದನ ಸಂಸ್ಥೆಯ ಎಂ.ವಿ.ಪ್ರತಿಭಾ ಹಾಜರಿದ್ದರು. ನಂತರ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಂದ ಡಾ. ನಾ.ಡಿಸೋಜ ರಚಿಸಿರುವ ‘ವಂಡರ್‌ಗಪ್ಪೆ ವಂಡರ್‌ಗಪ್ಪೆ ಹಾಗೂ ಎಸ್.ಮಾಲತಿ ರಚಿಸಿರುವ ‘ಮರದ ತಾಯಿ (ನಿರ್ದೇಶನ : ಎಂ.ವಿ.ಪ್ರತಿಭಾ) ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News