ಶಿವಮೊಗ್ಗ ಜಿಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮುಹೂರ್ತ ನಿಗದಿ
ಶಿವಮೊಗ್ಗ, ಎ. 19: ಅಂತೂ ಇಂತೂ ಕೊನೆಗೂ ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಗೆ ಮುಹೂರ್ತ ಫಿಕ್ಸ್ ಆಗಿದೆ. ಮೇ 5ರಂದು ಚುನಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಬೆಂಗಳೂರಿನ ಪಂಚಾಯತ್ ರಾಜ್ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ. ಬೆಂಗಳೂರಿನ ಪ್ರಾದೇಶಿಕ ಆಯುಕ್ತೆ ಜಯಂತಿಯವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಯಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿದುಬಂದಿದ್ದು, ಚುನಾವಣಾ ವೇಳಾಪಟ್ಟಿಯ ಅಧಿಕೃತ ಕಾರ್ಯಕಲಾಪಗಳ ಬಗ್ಗೆ ಬುಧವಾರ ಜಿಲ್ಲಾಡಳಿತ ಅಧಿಕೃತ ಪ್ರಕಟನೆ ಹೊರಡಿಸುವ ನಿರೀಕ್ಷೆಯಿದೆ. ಮೀಸಲು-ಬಲಾಬಲ:
ಮುಂದಿನ ಐದು ವರ್ಷಗಳ ಅವಧಿಗೆ ಶಿವಮೊಗ್ಗ ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಕರಡು ಪಟ್ಟಿಯನ್ನು ಎ. 5ರಂದು ರಾಜ್ಯ ಸರಕಾರ ಪ್ರಕಟಿಸಿತ್ತು. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಸಿಎಂ ಬಿ ಮಹಿಳೆಗೆ ಮೀಸಲಿರಿಸಿತ್ತು. ಎ. 15ರವರೆಗೆ ಆಕ್ಷೇಪಣೆಗೆ ಕಾಲಾವಾಕಾಶ ನೀಡಿತ್ತು. ಎ. 15ರಂದು ಅಂತಿಮ ಅಧಿಸೂಚನೆ ಪ್ರಕಟಿಸಿದ್ದ ಸರಕಾರ, ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಪ್ರಸ್ತುತ 31 ಸದಸ್ಯರ ಬಲವಿರುವ ಜಿಪಂ ನಲ್ಲಿ, ಬಹುಮತಕ್ಕೆ 16 ಸದಸ್ಯರ ಬೆಂಬಲ ಅತ್ಯವಶ್ಯಕವಾಗಿದೆ. 15 ಸದಸ್ಯರನ್ನು ಹೊಂದಿರುವ ಬಿಜೆಪಿ ಅತೀ ದೊಡ್ಡ ಪಕ್ಷವಾಗಿದ್ದು, ಸರಳ ಬಹುಮತಕ್ಕೆ ಕೇವಲ ಓರ್ವ ಸದಸ್ಯರ ಕೊರತೆ ಆ ಪಕ್ಷಕ್ಕಿದೆ. ಉಳಿದಂತೆ ಕಾಂಗ್ರೆಸ್ 8, ಜೆಡಿಎಸ್ 7 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಯಾರಿಗೆ ಅಧಿಕಾರ ಭಾಗ್ಯ?:
ಯಾರಿಗೂ ಸ್ಪಷ್ಟ ಬಹುಮತವಿಲ್ಲದೆ ಅತಂತ್ರ ಪರಿಸ್ಥಿತಿ ಮನೆ ಮಾಡಿರುವ ಜಿಪಂ ಆಡಳಿತ ಯಾರ ಪಾಲಾಗಲಿದೆ ಎಂಬುದೀಗ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ. ಅಧಿಕಾರದ ಗದ್ದುಗೆಯೇರಲು ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಅಧಿಕಾರದ ಗದ್ದುಗೆಯೇರುವವರ್ಯಾರು? ಎಂಬುದು ಮೇ 5ರಂದು ಸ್ಪಷ್ಟವಾಗಲಿದೆ. ಮಣಿಯದಿರುವ ನಿರ್ಧಾರ: ನಿರ್ಣಾಯಕ ಸ್ಥಾನದಲ್ಲಿರುವ ಪಕ್ಷೇತರ ಅಭ್ಯರ್ಥಿ ವೇದಾ ವಿಜಯಕುಮಾರ್‌ರವರು ತಮಗೆ ಅಧ್ಯಕ್ಷ ಸ್ಥಾನ ನೀಡುವ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವುದಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಜಿಪಂ ಆಡಳಿತ ಗದ್ದುಗೆಯೇರುವವರ್ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದ್ದು, ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
ಜೆಡಿಎಸ್ ಜೊತೆ ಚರ್ಚೆ: ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡ ಬೇಕೆಂಬ ಉದ್ದೇಶದಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಜಿಪಂ ಅಧಿಕಾರ ಚುಕ್ಕಾಣಿ ಹಿಡಿಯುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಆ ಪಕ್ಷದ ಮುಖಂಡರೊಂದಿಗೆ ಚರ್ಚೆ ಕೂಡ ನಡೆಸಲಾಗುತ್ತಿದೆ.
=ಕಲಗೋಡು ರತ್ನಾಕರ್, ಕಾಂಗ್ರೆಸ್ ಜಿಪಂ ಸದಸ್ಯ