×
Ad

1.50 ಕೋಟಿ ರೂ. ವೆಚ್ಚದಲ್ಲಿ ರಾಜಾಸೀಟು ಅಭಿವೃದ್ಧಿ

Update: 2016-04-19 21:58 IST

=ಎಸ್.ಕೆ.ಲಕ್ಷ್ಮೀಶ್

ಮಡಿಕೇರಿ, ಎ. 19: ನಗರದ ಹೆಸರುವಾಸಿ ಪ್ರವಾಸಿತಾಣ ರಾಜಾಸೀಟು ಉದ್ಯಾನವನದ ವಿಸ್ತರಣೆ ಮತ್ತು ಅಭಿವೃದ್ಧಿಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಹತ್ವಾಕಾಂಕ್ಷೆಯ ಯೋಜನೆಗೆ ಮತ್ತೆ ಜೀವ ಬಂದಿದ್ದು, ಸುಮಾರು 1.50 ಕೋಟಿ ರೂ.ಗಳಲ್ಲಿ ರಾಜಾಸೀಟು ಅಭಿವೃದ್ಧಿಯಾಗಲಿದೆ.

ಹಿಂದಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರ ಪ್ರಯತ್ನದ ಫಲವಾಗಿ ರಾಜಾಸೀಟಿನ ಸಮಗ್ರ ಅಭಿವೃದ್ಧಿಗಾಗಿ ಎರಡು ವರ್ಷಗಳ ಹಿಂದೆ 2 ಕೋಟಿ ರೂ. ಬಿಡುಗಡೆಯಾಗಿತ್ತು. ಇಂದಿಗೂ ಈ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲೇ ಇದ್ದು, ಇದರ ವಿನಿಯೋಗಕ್ಕೆ ಇದೀಗ ಕಾಲ ಕೂಡಿ ಬಂದಿದೆ. ರಾಜಾಸೀಟಿನ ಈಗಿರುವ ವಿಸ್ತೀರ್ಣ 5.72 ಎಕರೆಯಾಗಿದ್ದು, ಅಕ್ಕಪಕ್ಕದಲ್ಲಿರುವ ಸಿ ಮತ್ತು ಡಿ ಭೂಮಿಯನ್ನು ಸೇರಿಸಿಕೊಂಡು ಉದ್ಯಾನವನದ ವಿಸ್ತೀರ್ಣವನ್ನು 9 ಎಕರೆಗೆ ಹೆಚ್ಚಿಸಲಾಗುತ್ತಿದೆ. ಎರಡು ವರ್ಷಗಳ ಹಿಂದಿನ ಈ ಯೋಜನೆ ಬಗ್ಗೆ ವಕೀಲರ ಸ್ಪಂದನ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿ, ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಉದ್ದೇಶಿತ ಕಾರ್ಯ ಪ್ರಗತಿಯಾಗಿರಲಿಲ್ಲ. ಪ್ರಕೃತಿದತ್ತವಾಗಿರುವ ರಾಜಾಸೀಟು ಕಾಂಕ್ರಿಟ್‌ಮಯವಾಗುತ್ತದೆ ಎನ್ನುವ ಆತಂಕವನ್ನು ವಕೀಲರ ಸ್ಪಂದನ ವ್ಯಕ್ತಪಡಿಸಿತ್ತು. ಆದರೆ ಇತ್ತೀಚೆಗೆ ನ್ಯಾಯಾಲಯ ಪರಿಸರ ಸ್ನೇಹಿ ಉದ್ಯಾನವನ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದು, ಯೋಜನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸುಧೀಂದ್ರಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.

ನ್ಯಾಯಾಲಯದಿಂದ ಒಪ್ಪಿಗೆ ದೊರೆತಿರುವ ಹಿನ್ನೆಲೆ ರಾಜಾಸೀಟು ಅಭಿವೃದ್ಧಿ ಬಗ್ಗೆ ವಿಶೇಷ ಸಭೆ ನಡೆಸಿರುವ ಜಿಲ್ಲಾಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಡೆಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.

ಉದ್ಯಾನವನದ ವಿಸ್ತರಣೆಗಾಗಿ ಈಗಾಗಲೇ ಜಾಗ ಮಂಜೂರಾತಿಯಾಗಿದ್ದು, ಅರಣ್ಯ ಇಲಾಖೆಯಿಂದಲೂ ಸಹಕಾರ ದೊರೆತಿದೆ. ಹೆಚ್ಚುವರಿ ಜಾಗದಲ್ಲಿರುವ ಯಾವುದೇ ಮರಗಳನ್ನು ಕಡಿಯದೆ ಇನ್ನಷ್ಟು ಸಸಿಗಳನ್ನು ನೆಡುವ ಮೂಲಕ ಹಸಿರಿನ ಪರಿಸರವನ್ನು ಮತ್ತಷ್ಟು ಹೆಚ್ಚಿಸಲಾಗುವುದು. *ಫಲಪುಷ್ಪ ಪ್ರದರ್ಶನ: ಪ್ರತಿ ವರ್ಷದಂತೆ ಈ ಬಾರಿ ಕೂಡ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಮೇ ಕೊನೆ ವಾರದಲ್ಲಿ ಆಯೋಜಿಸಲಾಗಿದೆ. 4 ಲಕ್ಷ ರೂ. ಮೀಸಲಿಡಲಾಗಿದ್ದು, ಹೆಚ್ಚುವರಿಯಾಗಿ 1.50 ಕೋಟಿ ರೂ.ಗಳನ್ನು ಕೋರಲಾಗಿದೆ. ಪುಷ್ಪಪ್ರಿಯರ ಸಲಹೆಯಂತೆ ಈ ಬಾರಿ ಕಟ್ ಫ್ಲವರ್ಸ್‌ಗೆ ಬದಲಾಗಿ ಹೂವಿನ ಕುಂಡಗಳ ಶೃಂಗಾರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಸುಧೀಂದ್ರಕುಮಾರ್ ಮಾಹಿತಿ ನೀಡಿದರು.

ಕೈಬಿಟ್ಟ ಯೋಜನೆಗಳು: ನೆಹರೂ ಮಂಟಪದಿಂದ ರಾಜಾಸೀಟಿಗೆ ಸಾಗಲು ರೋಪ್ ವೇ ನಿರ್ಮಿಸುವ ಯೋಜನೆಯನ್ನು ಈ ಹಿಂದೆ ರೂಪಿಸಲಾಗಿತ್ತು. ಆದರೆ ಇದು ಪರಿಸರಕ್ಕೆ ಪೂರಕವಾಗಿರದ ಕಾರಣ ಕೈಬಿಡಲಾಗಿದೆ. ಐದು ಅಂತಸ್ತಿನ ವ್ಯೆಪಾಯಿಂಟ್ ಕಟ್ಟಡ ಕೂಡ ನಿರ್ಮಾಣಗೊಳ್ಳುವುದಿಲ್ಲವೆಂದು ಸುಧೀಂದ್ರಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News