×
Ad

ಗ್ರಾಮೀಣ ಆರ್ಥಿಕ ನೀತಿ ಪುನರ್ ರಚನೆಯಾಗಲಿ: ಬಂಜಗೆರೆ ಜಯಪ್ರಕಾಶ್

Update: 2016-04-19 22:07 IST

ಸಾಗರ, ಎ.19: ಕರ್ನಾಟಕದಲ್ಲಿ ಹಾವನೂರು ವರದಿ ಶಿಕ್ಷಣ, ಉದ್ಯೋಗಕ್ಕೆ ರಹದಾರಿ ಕಲ್ಪಿಸಿತ್ತು. ಭೂಮಿಯ ಹಕ್ಕಿನ ತಳಹದಿಯ ಮೇಲೆ ಯುವಜನರು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಕಾಗೋಡು ಸತ್ಯಾಗ್ರಹ ಕಾರಣವಾಗಿತ್ತು. ಇವುಗಳನ್ನು ನೆನಪಿಸಿಕೊಳ್ಳುವ ಕೆಲಸ ಜನರು ಮಾಡುತ್ತಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.

ಇಲ್ಲಿನ ಸರಕಾರಿ ನೌಕರರ ಭವನದಲ್ಲಿ ಸೋಮವಾರ ಜಿಲ್ಲಾ ಕನ್ನಡ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಡಾ. ಎಚ್.ಗಣಪತಿಯಪ್ಪ ಸೇವಾ ಟ್ರಸ್ಟ್, ಸಹೃದಯ ಬಳಗ ಹಾಗೂ ವೀತರಾಗ ಟ್ರಸ್ಟ್ ವತಿಯಿಂದ ‘ಕಾಗೋಡು ಹೋರಾಟದ ನೆನಪು’ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭೂಮಿ-ಬದುಕು-ಬವಣೆ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರೈತರ ಭೂಮಿಯನ್ನು ಅವರ ಅನುಮತಿ ಇಲ್ಲದೆ ನಾಲ್ಕಾರು ಬಾರಿ ಸುಗ್ರಿವಾಜ್ಞೆ ಮೂಲಕ ವಶಪಡಿಸಿಕೊಳ್ಳಲು ಕೇಂದ್ರ ಸರಕಾರ ಪ್ರಯತ್ನ ನಡೆಸುತ್ತಿದೆ. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ತಮ್ಮ ಧೋರಣೆಯನ್ನು ಕೈಬಿಟ್ಟಿದ್ದಾರೆ. ಇಂತಹ ಸಂಕೀರ್ಣ ಸ್ಥಿತಿಯಲ್ಲಿ ಗ್ರಾಮೀಣ ಭಾರತದ ರೈತರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗಬೇಕಾಗಿದೆ ಎಂದರು. ಗ್ರಾಮೀಣ ಆರ್ಥಿಕ ನೀತಿಯನ್ನು ಪುನರ್ ರಚಿಸಬೇಕಾಗಿದೆ. ಗ್ರಾಮೀಣ ಯುವಕರು ಚಾಕರಿಗಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಹಳ್ಳಿ ಗಳಲ್ಲಿ ವೃದ್ಧ ತಂದೆ ತಾಯಂದಿರು ಅನಾಥರಾಗಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.

 ಸಮಾಜವಾದ, ಸಾಮಾಜಿಕ ಮೌಲ್ಯ ಹಾಗೂ ಸಮಷ್ಠಿ ಹಿತ ಕಣ್ಮರೆಯಾಗುತ್ತಿರುವ ಹೊತ್ತಿನಲ್ಲಿ ನಾವು ಜವಾಬ್ದಾರಿಯುತ ಹೆಜ್ಜೆ ಇಡಬೇಕಾಗಿದೆ. ಅದಕ್ಕೆ ಹೋರಾಟದ ಹಾದಿ ಮಾರ್ಗದರ್ಶನವಾಗಬೇಕು ಎಂದು ಅಭಿಪ್ರಾಯಿಸಿದರು.

ಲೇಖಕ ವಿ.ಟಿ.ಸ್ವಾಮಿ ಅವರ ಬಣ್ಣದ ಚಿಟ್ಟೆ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಡಾ .ನಾ.ಡಿಸೋಜ, ಕವಿ ವಿ.ಟಿ.ಸ್ವಾಮಿ ಅವರು ಪ್ರಕೃತಿ, ಶಾಲೆ, ನಮ್ಮ ಸುತ್ತಮುತ್ತಲಿನ ಜನಸಮೂಹ, ಶ್ರಮಿಕವರ್ಗದ ಕುರಿತು ಕವನ ರಚನೆ ಮಾಡಿದ್ದಾರೆ ಎಂದರು. ಡಾ. ಎಚ್.ಗಣಪತಿಯಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಸದಸ್ಯ ಕಾಗೋಡು ಅಣ್ಣಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ, ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News