ಹಣವೇ ಸರ್ವಸ್ವ ಎಂಬ ಮನೋಭಾವ ತೊಲಗಲಿ: ವಿಮರ್ಶಕ ಟಿ.ಪಿ.ಅಶೋಕ್

Update: 2016-04-19 16:38 GMT

ಶಿವಮೊಗ್ಗ,ಎ.19: ಕೇವಲ ಹಣದಿಂದ ಎಲ್ಲವನ್ನೂ ಸೃಷ್ಟಿಸಬಹುದು ಎಂಬ ಮನೋಭಾವ ಹೆಚ್ಚಾಗುತ್ತಿದೆ. ಇದರಿಂದಾಗಿ ನೆಮ್ಮದಿ, ವೌಲ್ಯ, ಸಂಬಂಧ, ನಂಬಿಕೆ, ನೈತಿಕತೆ ಕಡಿಮೆಯಾಗುತ್ತಿದೆ. ಜೊತೆಗೆ ಭಾಷೆಯ ಅಸ್ತಿತ್ವವನ್ನೂ ಸಹ ಕಳೆದುಕೊಳ್ಳುತ್ತಿದ್ದೇವೆ ಎಂದು ವಿಮರ್ಶಕ ಟಿ.ಪಿ.ಅಶೋಕ್ ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಹೊಸ ಕಾಲ ಹೊಸ ಕಥನ (ಕನ್ನಡದ ಇತ್ತೀಚಿನ ಕಥೆಗಳ ಓದು) ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗೀಕರಣ ಮತ್ತು ಔದ್ಯಮೀಕರಣದಿಂದ ಪ್ರಸ್ತುತ ಪರಿಸ್ಥಿತಿ ಸಂಕೀರ್ಣವಾಗಿದೆ. ಬದಲಾವಣೆಯ ಪಲ್ಲಟ ಶುರುವಾಗಿದೆ. ಇದನ್ನರಿಯಲು ಹೊಸ ಪ್ರತಿಭೆ ಮತ್ತು ವಿಚಾರಧಾರೆಗಳು ಅಗತ್ಯವಾಗಿದೆ ಎಂದರು. ಜಾಗತೀಕರಣ, ಮುಕ್ತಮಾರುಕಟ್ಟೆ ಮತ್ತು ನವಬಂಡವಾಳ ಶಾಹಿ ವ್ಯವಸ್ಥೆಯು ಆಧುನಿಕತೆಯ ಮೇಲೆ ಸವಾರಿ ಮಾಡುತ್ತಿವೆ. ಹುಲಿಯ ಮೇಲೆ ಸವಾರಿ ಮಾಡುವಂತಹ ಸ್ಥಿತಿಯಲ್ಲಿ ದೇಶವಿದೆ. ಈ ಎಲ್ಲ್ಲ ಪರಿಸ್ಥಿತಿಗಳನ್ನು ಕೈಯಾರೇ ತಂದುಕೊಂಡು ಗೋಜಲು ವ್ಯವಸ್ಥೆಯನ್ನು ಸೃಷ್ಟಿಸಿಕೊಂಡಿದ್ದೇವೆ. ಆರ್ಥಿಕ ಲಾಭವೊಂದೇ ಮುಖ್ಯವಾಗಿರುವುದು ಈ ವೈರುಧ್ಯಗಳಿಗೆ ಕಾರಣವಾಗಿದೆ ಎಂದರು. ವಿಷ ವರ್ತುಲ: ಹೊಸತನಕ್ಕೆ ತೆರೆದುಕೊಂಡಿರುವ ನಾವು ಜಾತಿ ವ್ಯವಸ್ಥೆಯ ವಿಷ ವರ್ತುಲದಲ್ಲಿ ಸಿಲುಕಿ ಹಾಕಿಕೊಂಡಿದ್ದೇವೆ. ದಲಿತರ ಬಗ್ಗೆ ಈಗ ಚಿಂತನೆ ಆರಂಭವಾಗಿದೆ. ಹೊಸ ಕಾಲದ ವಿದ್ಯಮಾನಗಳು ನಿರ್ಣಯಾತ್ಮಕವಾಗುವಂತಾಗಿದೆ. ಇದು ಯೋಚನಾಕ್ರಮ ಮತ್ತು ಜೀವನ ಕ್ರಮವನ್ನು ಬದಲಿಸುತ್ತಿವೆ. ಆದ್ದರಿಂದ ಈ ಶತಮಾನದ ಸಮಾಜ ಮತ್ತು ಸಂಸ್ಕೃತಿ ನಿರ್ಣಯಾತ್ಮಕವಾಗಿದೆ ಎಂದು ವಿಶ್ಲೇಶಿಸಿದರು.

ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯನ್ನೂ ಸಹ ಖಾಸಗೀಕರಣ ಮಾಡುವ ನಿರ್ಧಾರಕ್ಕೆ ಬಂದು ತಲುಪಿದ್ದೇವೆ. ಎಲ್ಲವನ್ನೂ ರಾಷ್ಟ್ರೀಕರಣ ಮಾಡುವ ಬದಲು ಖಾಸಗೀಕರಣ ಮಾಡತೊಡಗಿದ್ದೇವೆ. ಇದರಿಂದ ಈಗಿನ ಪರಿಸ್ಥಿತಿ ತುಂಬಾ ಸಂಕೀರ್ಣವಾಗಿದೆ ಎಂದು ವಿವರಿಸಿದರು.

ವಿಚಾರ ಸಂಕಿರಣದಲ್ಲಿ ಕಥೆಗಾರರಾದ ವಿವೇಕ ಶಾನಬಾಗ, ವಸುಧೇಂದ್ರ, ಮಾಧವ ಚಿಪ್ಪಳಿ ಇವರು ಹೊಸ ಕಥನಗಳ ಬಗ್ಗೆ ವಿಷಯ ಮಂಡಿಸಿದರು. ಇನ್ನೊಬ್ಬ ಕಥೆಗಾರ ವೌನೇಶ್ ಬಡಿಗೇರ್ ಕಥಾವಾಚನ ನಡೆಸಿ ಸಂವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News