×
Ad

ಕ್ರೈಸ್ತರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

Update: 2016-04-19 22:18 IST

ಚಿಕ್ಕಮಗಳೂರು, ಎ.19: ಅಲ್ಪಸಂಖ್ಯಾತರ ಇಲಾಖೆ ಮೂಲಕ ಕ್ರೈಸ್ತರಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯಗಳು ದೊರಕುತ್ತಿಲ್ಲ. ಸೌಲಭ್ಯ ಪಡೆಯುವಾಗ ಅನೇಕ ತೊಂದರೆಗಳು ಇವೆ. ಆದ್ದರಿಂದ ಕ್ರೈಸ್ತರ ಅಭಿವೃದ್ಧಿಗೆ ಕರ್ನಾಟಕ ಕ್ರೈಸ್ತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದರೆ ಕ್ರೈಸ್ತರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಕರ್ನಾಟಕ ಕ್ರಿಶ್ಚಿಯನ್ ಪರಿಷತ್‌ನ ನಿರ್ದೇಶಕ ಹಾಗೂ ಎಂಎಲ್ಸಿ ಐವನ್ ಡಿಸೋಜರಿಗೆ ಚಿಕ್ಕಮಗಳೂರಿನಲ್ಲಿ ಮನವಿ ಸಲ್ಲಿಸಿದರು.

 ಕರ್ನಾಟಕದ ಪ್ರತಿಯೊಂದು ಜಿಲ್ಲೆಯಿಂದ ಒಬ್ಬ ಕ್ರೈಸ್ತ ಪ್ರತಿನಿಧಿಯನ್ನು ಈ ನಿಗಮಕ್ಕೆ ನಿರ್ದೇಶಕರನ್ನಾಗಿ ನೇಮಕ ಮಾಡುವುದರ ಮೂಲಕ ಸರಕಾರದ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ, ಕರ್ನಾಟಕ ಕ್ರೈಸ್ತರ ಆಯೋಗ ರಚನೆ, ಕ್ರೈಸ್ತ ಸಮುದಾಯದ ಯುವಕರಿಗೆ ಇತ್ತೀಚಿನ ವರ್ಷಗಳಲ್ಲಿ ಸರಕಾರ ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಆದ್ದರಿಂದ ಮುಸ್ಲಿಂ ಜನಾಂಗಕ್ಕೆ ಉದ್ಯೋಗ ಹಾಗೂ ಶಿಕ್ಷಣ ಮೀಸಲಾತಿ ನೀಡಿದಂತೆ ಕ್ರೈಸ್ತರಿಗೆ ಶೇ.3 ರಷ್ಟು ಉದ್ಯೋಗ ಮೀಸಲಾತಿ ನೀಡಿದಲ್ಲಿ ತಮ್ಮ ಯುವ ಜನರಿಗೆ ಸರಕಾರ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಮನೆ ನಿರ್ಮಾಣ ಮಾಡಲು ಬ್ಯಾಂಕಿನಿಂದ ಸಾಲ ಪಡೆದವರಿಗೆ 1 ಲಕ್ಷ ರೂ. ಬಾಕಿ ಇದ್ದಲ್ಲಿ, ಅಭಿವೃದ್ಧಿ ನಿಗಮ 1 ಲಕ್ಷ ರೂ. ಬಡ್ಡಿ ಸಹಾಯಧನವನ್ನು ಸಾಲ ಪಡೆದ ಕ್ರೈಸ್ತರಿಗೆ ಬ್ಯಾಂಕಿನಿಂದ ಸಾಲದ ಬಡ್ಡಿ ಬಾಕಿ ಪಾವತಿಸುತ್ತದೆ. ಈ ರೀತಿಯ ನಿಯಮದಿಂದ ಯಾವುದೇ ಅನುಕೂಲ ದೊರಕುತ್ತಿಲ್ಲ. ಈ ಸೌಲಭ್ಯ ಮಾರ್ಪಾಡಾದರೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಲು ಸಾಲ ನೀಡಿ 2 ಲಕ್ಷ ರೂ. ಸಹಾಯಧನ ನೀಡಿದರೆ ಕ್ರೈಸ್ತರಿಗೆ ಮನೆ ಕಟ್ಟಲು ಅನುಕೂಲ ಮಾಡಿದಂತಾಗುತ್ತದೆ ಎಂದಿದ್ದಾರೆ.

ಕ್ರೈಸ್ತ ಸಮುದಾಯದವರ ಪವಿತ್ರ ಸ್ಥಳ ಜೆರುಸಲೆಂ (ಹೋಲಿ ಲ್ಯಾಂಡ್)ಗೆ ಹೋಗಲು ಹಜ್ ಮಾದರಿಯಲ್ಲಿ ಹಣಕಾಸು ನೆರವನ್ನು ಸರಕಾರ ನೀಡುವ ವ್ಯವಸ್ಥೆ ಮಾಡಿಕೊಡಬೇಕು. ಅಲ್ಪಸಂಖ್ಯಾತರ ವತಿಯಿಂದ ರಾಜ್ಯ ಹಾಗೂ ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್‌ಶಿಪ್‌ನಲ್ಲಿ ತಾರತಮ್ಯ ಮಾಡುತ್ತದೆ. ಈ ಸೌಲಭ್ಯ ಎಲ್ಲರಿಗೂ ಒಂದೇ ರೀತಿಯಲ್ಲಿ ನೀಡುವ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಮಯದಲ್ಲಿ ಪ್ರಧಾನ ಕಾರ್ಯದರ್ಶಿ ಸಿಲ್ವಸ್ಟರ್ ರೊನಾಲ್ಡ್ ಸೆರಾವೊ, ಖಜಾಂಚಿ ಜೇಮ್ಸ್ ಡಿಸೋಜ ಹಾಗೂ ರೋಬೆನ್ ಮೊಸೆಸ್ ಮತ್ತಿತರರು ಉಪಸ್ಥಿತರಿದ್ದರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News