ಸಮಾಜಮುಖಿ ಕಾರ್ಯಗಳಲ್ಲಿ ಜೈನ ಸಮಾಜದ ಕೊಡುಗೆ ಅಪಾರ: ಮಹಾವೀರ್ ಸುರಾನ
ಕಡೂರು, ಎ.19: ದೇಶದ ಸಮಾಜಮುಖಿ ಕಾರ್ಯಗಳಲ್ಲಿ ಜೈನ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಜೈನ ಮೂರ್ತಿ ಪೂಜಾ ಸಂಘದ ಅಧ್ಯಕ್ಷ ಮಹಾವೀರ್ ಸುರಾನ ತಿಳಿಸಿದ್ದಾರೆ.
ಅವರು ಮಂಗಳವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇದೇ ಪ್ರಥಮ ಬಾರಿಗೆ ಏರ್ಪಡಿಸಿದ್ದ ಮಹಾವೀರ ಜಯಂತಿ ಸಮಾರಂಭದಲ್ಲಿ ಮಾತನಾಡಿದರು. ಇಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈವರೆಗೂ ಕೇಂದ್ರ ಮತ್ತು ರಾಜ್ಯ ಸರಕಾರವು ಜೈನ ಸಮಾಜವನ್ನು ನಿರ್ಲಕ್ಷಿಸುತ್ತಾ ಬಂದಿದೆ. ಈಗ ಮಹಾವೀರ ಜಯಂತಿಯನ್ನು ಸರಕಾರದ ಕಾರ್ಯಕ್ರಮವಾಗಿ ಆಚರಣೆಗೆ ತಂದಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಸಮಾಜದ ಮುಖಂಡ ಶಿವರತನ್ ಸಂಚೇತಿ ಮಾತನಾಡಿ, ಜೈನ ಸಮಾಜವು ಶಾಂತಿಪ್ರಿಯ ಸಮಾಜವಾಗಿದೆ. ಸಮಾಜಮುಖಿ ಕೆಲಸಗಳಿಗೆ ನಿರಂತರವಾಗಿ ಕೊಡುಗೆಯನ್ನು ನೀಡುತ್ತಿದೆ. ಜೈನ ಸಮಾಜಕ್ಕೆ ಚಾತುರ್ಮಾಸ ಅತಿ ಮುಖ್ಯವಾಗಿದ್ದು, ಈ ಚಾತುರ್ಮಾಸದ ಕೊನೆಯ ನಾಲ್ಕು ದಿನ ಉಪವಾಸವನ್ನು ಆಚರಿಸಲಾಗುತ್ತದೆ. ಇಂತಹ ಸಮಯದಲ್ಲಿ ಸರಕಾರ ಕಸಾಯಿ ಮತ್ತು ಮಾಂಸದ ಅಂಗಡಿಗಳಲ್ಲಿ ಪ್ರಾಣಿ ಹತ್ಯೆಯನ್ನು ತಡೆಯಬೇಕೆಂದು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಂ. ಭಾಗ್ಯಾ ಮಾತನಾಡಿ, ಕೊನೆಯ ಕ್ಷಣದಲ್ಲಿ ಸರಕಾರದಿಂದ ಮಹಾವೀರ ಜಯಂತಿಯನ್ನು ಆಚರಿಸುವಂತೆ ಸುತ್ತೋಲೆ ಬಂದ ಕಾರಣ ಪೂರ್ವ ತಯಾರಿ ಮಾಡಿಕೊಳ್ಳಲು ಸಮಯದ ಕೊರತೆ ಎದುರಾಯಿತು. ಮುಂದಿನ ಸಾಲಿನಿಂದ ಇತರ ರಾಷ್ಟ್ರೀಯ ಹಬ್ಬಗಳಂತೆ ಮಹಾವೀರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು. ಸಿಂಗಟಗೆರೆ ಜಿಪಂ ಸದಸ್ಯ ಮಹೇಶ್‌ಒಡೆಯರ್ ಮಾತನಾಡಿದರು.
ಜಯಂತಿ ಅಂಗವಾಗಿ ಜೈನ ಸಮಾಜದ ವತಿಯಿಂದ ಮಹಾವೀರರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಜೈನ ಸಮಾಜದ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಬಿಸ್ಕತ್ ಪೊಟ್ಟಣಗಳನ್ನು ಹಂಚಲಾಯಿತು.
ಈ ಸಂದಭರ್ದಲ್ಲಿ ಜೈನ ಸಮಾಜದ ಅಧ್ಯಕ್ಷ ಅಮೃತಲಾಲ್ ಮೆಹತಾ, ಪೊಪ್ಪಟ್ ಲಾಲ್, ಮೂಲ್ ಚಂದ್ ಕೊಠಾರಿ, ಪ್ರಕಾಶ್ ಮೆಹತಾ, ಮದನ್‌ಲಾಲ್ ಸುರಾನ, ರಾಜುಬಾಪ್ನಾ, ಮಧುಜೈನ್, ಸುಷ್ಮಾಜೈನ್, ಕಾಂತಜೈನ್, ಸಂಗೀತಾಜೈನ್ ಉಪಸ್ಥಿತರಿದ್ದರು.