ಗಣಿ ಲಂಚ ಪಡೆದ ಸಂಸದ ಅನಂತಕುಮಾರ್ ಹೆಗಡೆ

Update: 2016-04-20 06:18 GMT

ಕಾರವಾರ, ಎ.20: ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅಕ್ರಮ ಅದಿರು ಸಾಗಾಟಕ್ಕೆ ಸಂಬಂಧಿಸಿ ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯಿಂದ ಲಕ್ಷಾಂತರ ರೂ. ಲಂಚ ಪಡೆದಿದ್ದಾರೆ ವಿಜಯವಾಣಿ ಕನ್ನಡ ದೈನಿಕ ವರದಿ ಮಾಡಿದೆ.
ಅಕ್ರಮ ಅದಿರು ಸಾಗಾಟ ಹಾಗೂ ಅಲ್ಲಿಯ ಭ್ರಷ್ಟಾಚಾರದ ತನಿಖೆ ಕುರಿತು ನೇಮಿಸಲಾಗಿದ್ದ ಲೋಕಾಯುಕ್ತದ ಎಸ್‌ಐಟಿ ಎಸ್ಪಿ ಎಚ್.ಎಸ್.ರೇವಣ್ಣ ವಶಪಡಿಸಿಕೊಂಡ ದಾಖಲೆಗಳಿಂದ ಇದು ಬಹಿರಂಗವಾಗಿದೆ. ಈ ಕುರಿತಂತೆ ಎಸ್‌ಐಟಿ ಬೆಂಗಳೂರು 23ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಎಸ್‌ಐಟಿ ಸಲ್ಲಿಸಿರುವ ಎಫ್‌ಐಆರ್ ಸಲ್ಲಿಸಿದೆ. 2005ರಿಂದ 2007ರವರೆಗಿನ ಅವಧಿಯಲ್ಲಿ ಅನಂತಕುಮಾರ ಹೆಗಡೆಗೆ ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆ ವರ್ಷಕ್ಕೆ 2 ಲಕ್ಷ ರೂ.ನಂತೆ ಒಟ್ಟು 6 ಲಕ್ಷ ರೂ. ಪಾವತಿಸಿದೆ. ಜೊತೆಗೆ ಓರ್ವ ಶಾಸಕರಿಗೆ 5.5 ಲಕ್ಷ ರೂ. ಪಾವತಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ. ಆದರೆ ಆ ಶಾಸಕರು ಯಾರು ಎನ್ನುವುದು ಸ್ಪಷ್ಟವಿಲ್ಲ ಎಂದು ಪತ್ರಿಕೆ ವರದಿಯಲ್ಲಿ ಹೇಳಿದೆ.
ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 2,65,68,230 ರೂ. ಹಣ ಪಾವತಿಯಾಗಿದ್ದು, ಅಕ್ರಮ ಅದಿರು ರಫ್ತು ನಡೆಸುವ ಸಲುವಾಗಿ ಇದನ್ನು ಲಂಚದ ರೂಪದಲ್ಲಿ ನೀಡಿರಬಹುದು ಎಂಬ ಸಂಶಯ ವ್ಯಕ್ತಪಡಿಸಲಾಗಿದೆ. ನ್ಯಾಯಾಧೀಶರು, ಪೊಲೀಸ್ ಮತ್ತು ಬಂದರು ಇಲಾಖೆ ಅಧಿಕಾರಿಗಳು ಸೇರಿ ಹಲವರು ಪಡೆದಿರುವ ಲಂಚದ ವಿವರಗಳು ಅಕ್ರಮ ದಾಖಲೆಯಲ್ಲಿವೆ.
ಗೌಪ್ಯ ವಿಚಾರಣೆ: ಅಕ್ರಮ ಅದಿರು ಸಾಗಾಟ ಪ್ರಕರಣದ ವಿಚಾರಣೆ ಕೈಗೊಂಡಿರುವ ಎಸ್ ಐಟಿ ಸಂಸದ ಅನಂತಕುಮಾರ ಹೆಗಡೆ ಅವರನ್ನೂ ಗುಪ್ತವಾಗಿ ವಿಚಾರಣೆ ನಡೆಸಿದೆ ಎನ್ನಲಾಗಿದೆ. ಆದರೆ ವಿಷಯವನ್ನು ಇಷ್ಟುಕಾಲ ಗೌಪ್ಯವಾಗಿಟ್ಟುಕೊಂಡಿದ್ದು ಆಶ್ಚರ್ಯ ಉಂಟುಮಾಡಿದೆ. ಅದಾನಿ ಎಂಟರ್‌ಪ್ರೈಸಸ್, ಬೇಲೆಕೇರಿಯ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕ ನೌಕರರ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅನ್ವಯ ಎಸ್‌ಐಟಿ ದೂರು ದಾಖಲಿಸಿಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News