ಅನಧಿಕೃತ ಮೀನು ಮಾರಾಟ ಅಂಗಡಿ ತೆರವಿಗೆ ಆಗ್ರಹ

Update: 2016-04-20 16:22 GMT

ಕಾರವಾರ, ಎ.20: ಗೋಕರ್ಣ ಮೀನುಮಾರುಕಟ್ಟೆ ಬಳಿ ಅನಧಿಕೃತವಾದ ಅಂಗಡಿಯೊಂದರ ಮೂಲಕ ಮೀನು ಮಾರಾಟ ನಡೆಸುತ್ತಿದ್ದು, ಕೂಡಲೇ ಆ ಅಂಗಡಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗೋಕರ್ಣ ಮೀನುಗಾರರ ಸಮುದಾಯದವರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ನೀಡಿ ಆಗ್ರಹಿಸಿದರು.

ಮೀನುಗಾರಿಕೆಗೆ ಸಂಬಂಧಪಟ್ಟ ಯಾವ ಇಲಾಖೆಯ ಪರವಾನಿಗೆ ಪಡೆಯದೆ, ಮಂಜುನಾಥ ಮುಕುಂದ ಕಿನ್ನರ ಎಂಬವರು ಮೀನುಮಾರುಕಟ್ಟೆಯ ಮಧ್ಯದಲ್ಲಿ ಅನಧಿಕೃತವಾಗಿ ಅಂಗಡಿ ಇಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ಸಣ್ಣಪುಟ್ಟ ಮೀನುಗಾರರು ತೊಂದರೆ ಅನುಭವಿಸುವಂತಾಗಿದೆ. ಇವರು ಮಾರಾಟಕ್ಕೆ ತರುವ ಮೀನಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಬೇರೆ ಕಡೆಯಿಂದ ಮೀನು ತರಿಸಿ ಐಸ್ ಬಾಕ್ಸ್‌ನಲ್ಲಿ ದೊಡ್ಡ ಗಾತ್ರದ ಮೀನು ಸಂಗ್ರಹಿಸಿಟ್ಟು ಎಲ್ಲ ಸಂದರ್ಭದಲ್ಲೂ ವ್ಯಾಪಾರ ಮಾಡುವುದರಿಂದ ಹಗಲಿರುಳು ದುಡಿಯುವ ನಮಗೆ ಮೀನು ಮಾರಾಟವಾಗದೆ ದಿಕ್ಕೇ ಕಾಣದಾಗಿದೆ ಎಂದು ಮನವಿಯಲ್ಲಿ ದೂರಿದ್ದಾರೆ.

ಬ್ಯಾಂಕ್‌ಗಳಲ್ಲಿ, ಅವರಿವರಲ್ಲಿ ಸಾಲ ಮಾಡಿ ದೋಣಿ, ಬಲೆ ಮಾಡಿಕೊಂಡಿರುವ ನಮಗೆ ಸಾಲ ತೀರಿಸಲಾಗದೆ ತೊಂದರೆಯಲ್ಲಿ ಸಿಲುಕಿದ್ದೇವೆ. ಇಲ್ಲಿನ ಮಾರುಕಟ್ಟೆಯಲ್ಲಿ ಗೋಕರ್ಣ, ದುಬ್ಬನಶಶಿ, ಹೊಸ್ಕಟ್ಟ ಮತ್ತು ಮೂಡಂಗಿ ಗ್ರಾಮದವರಾದ ಮೀನುಗಾರ ಸಮುದಾಯದ ಅಂಬಿಗ, ಗಾಬಿತ್ ಹಾಗೂ ಹರಿಕಾಂತ ಸಮಾಜದವರು ಮೀನು ಮಾರಾಟ ಮಾಡುತ್ತಾರೆ. ಈ ಗ್ರಾಮಗಳಲ್ಲಿ ಅಂಬಿಗ ಸಮಾಜದ 64, ಗಾಬಿತ್ ಸಮಾಜದ 104, ಹರಿಕಂತ್ರ ಸಮಾಜದ 60 ಕುಟುಂಬಗಳು ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಅವರು ಹಿಡಿದು ತಂದ ಮೀನನ್ನು ಗೋಕರ್ಣ ಮೀನು ಮಾರುಕಟ್ಟೆಯಲ್ಲಿ ತಂದು ಮಾರಾಟ ಮಾಡಬೇಕಾಗುತ್ತದೆ. ಆದ್ದರಿಂದ ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ, ಕಂದಾಯ ಇಲಾಖೆಯ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮೀನು ವ್ಯಾಪಾರ ಮಾಡುತ್ತಿರುವ ಮಂಜುನಾಥ ಮುಕುಂದ ಕಿನ್ನರ ಅವರ ಅಂಗಡಿಯನ್ನು ತಕ್ಷಣ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿವಿಧ ಮೀನುಗಾರ ಸಮಾಜದ ಪ್ರಮುಖರಾದ ಮಂಕಾಳು ಅಂಬಿಗ, ಪುರುಷಯ ವೆಂಕಣ್ಣ ಅಂಬಿಗ, ಹನುಮಂತ್, ಸೋಮಯ್ಯ, ರಾಮಾ ಮಾಣೇಶ್ವರ್ ಅಂಬಿಗ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News