ಕಸಾಪ ಮಾಜಿ ಅಧ್ಯಕ್ಷರಿಂದ ಹಣ ದುರ್ಬಳಕೆ: ಆರೋಪ
ಶಿವಮೊಗ್ಗ,ಎ.20: ಕನ್ನಡ ಸಾಹಿತ್ಯ ಪರಿಷತ್ (ಕ.ಸಾ.ಪ.) ಮಾಜಿ ಅಧ್ಯಕ್ಷ ಡಿ.ಮಂಜುನಾಥ್‌ರವರ ಅವಧಿಯಲ್ಲಿ ಹಣ ದುರುಪಯೋಗವಾಗಿದೆ. ಈ ಕುರಿತಂತೆ ಸೂಕ್ತ ತನಿಖೆ ನಡೆಸಬೇಕು. ಕರ್ತವ್ಯ ಲೋಪ ಎಸಗಿದ ಮಾಜಿ ಅಧ್ಯಕ್ಷರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ, ಬುಧವಾರ ಹಾಲಿ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪರವರ ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳು ನಗರದ ಡಿ.ಸಿ. ಕಚೇರಿ ಮುಂಭಾಗ ಧರಣಿ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿದರು. ಕಸಾಪಕ್ಕೆ ಹೊಸ ಆಡಳಿತ ಮಂಡಳಿ ಬಂದಿದ್ದರೂ, ಮಂಜುನಾಥ್‌ರವರು ಕಚೇರಿಗೆ ಸಂಬಂಧಿಸಿದ ಅಗತ್ಯ ದಾಖಲೆ, ಕಡತಗಳನ್ನು ಹಸ್ತಾಂತರ ಮಾಡಿಲ್ಲ. ಈಗಾಗಲೇ ಹಲವು ಬಾರಿ ಅವರ ಗಮನಕ್ಕೆ ತರಲಾಗಿದ್ದರೂ ದಾಖಲೆ ಹಸ್ತಾಂತರಿಸುವ ಕೆಲಸ ಮಾಡಿಲ್ಲವೆಂದು ಪ್ರತಿಭಟನಾಕಾರರು ದೂರಿದ್ದಾರೆ. ಜಿಲ್ಲೆಯ ಹೆಮ್ಮೆಯ ಸಾಹಿತ್ಯ ಗ್ರಾಮ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ ಬಂದ ಅನುದಾನದ ಹಣ ಬಳಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಸಾಹಿತ್ಯ ಗ್ರಾಮ ನಿರ್ಮಾಣ ಮಾಡಲು ಬಂದ 1 ಕೋಟಿ ರೂ.ವನ್ನು ಬಳಸಿಕೊಂಡು ನಡೆಸಲಾಗಿರುವ ಕಟ್ಟಡ ಕಾಮಗಾರಿಯು ಯಾವ ಟೆಂಡರ್ ಮೂಲಕ ನಡೆಸಲಾಗಿದೆ ಎಂಬುವುದಕ್ಕೆ ಯಾವುದೇ ದಾಖಲೆ ಇಲ್ಲವಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. ಕಸಾಪ ಅಧ್ಯಕ್ಷರ ಖಾತೆಗೆ ಜಮೆಯಾಗಿದ್ದ ಸರಕಾರದ 1 ಕೋಟಿ ರೂ.ಇತರೆ ವ್ಯಕ್ತಿಗಳ ಖಾತೆಗಳಿಗೆ ಜಮೆಯಾಗಿದೆ. ಯಾವ ಉದ್ದೇಶದಿಂದ ಸಂದಾಯ ಆಗಿದೆ ಎಂಬುದು ತಿಳಿಯುತ್ತಿಲ್ಲ. ಸರಕಾರದಿಂದ ಬಂದ ಹಣವನ್ನು ಸ್ವಂತಕ್ಕಾಗಿ ಬಳಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಪ್ರತಿಭಟನೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ. ಶಂಕರಪ್ಪ, ಕಾರ್ಯದರ್ಶಿ ಜಗದೀಶ್, ಮಾದಪ್ಪ, ರುದ್ರಮುನಿ ಎಸ್.ಸಜ್ಜನ್, ಎಸ್.ಬಿ.ಚಂದ್ರಕಲಾ, ಭೀಮೇಶ್ವರಪ್ಪ, ನಾಗಪ್ಪ ಗೋಪಜ್ಜಿ ಮತ್ತಿತರರು ಉಪಸ್ಥಿತರಿದ್ದರು.