ಕೇಂದ್ರ ಸರಕಾರದಿಂದ ತಂಬಾಕು ನಿಷೇಧ ಕಾಯ್ದೆ ಜಾರಿ
ದಾವಣಗೆರೆ, ಎ. 20: ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ನೀಡದೆ ಬೀದಿಗೆ ತಳ್ಳುವ ನೀತಿಯನ್ನು ವಿರೋಧಿಸಿ ಬೀಡಿ ಕೆಲಸಗಾರರ ಸಂಘ ಹಾಗೂ ಸಿಐಟಿಯು ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬಿಎಸ್ಸೆನ್ನೆಲ್ ಕಚೇರಿಯಿಂದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗೆ ತೆರಳಿ ಬಹಿರಂಗ ಸಭೆ ನಡೆಸಿದರು. ಈ ಸಂದರ್ಭ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್, ಪ್ರಧಾನಿ ನರೇಂದ್ರ ಮೋದಿ ಸರಕಾರ ಬಡ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ 3 ಕೋಟಿ ರೂ. ಹೆಚ್ಚಿರುವ ತಂಬಾಕು ಆಧಾರಿತ ಕಾರ್ಮಿಕರಿಗೆ ಯಾವುದೇ ಬದಲಿ ಬದುಕುವ ವ್ಯವಸ್ಥೆ ಮಾಡದೆ ತಂಬಾಕು ನಿಷೇಧ ಹೆಸರಿನಲ್ಲಿ ಬಡ ಬೀಡಿಕಾರ್ಮಿಕರನ್ನು ಬೀದಿಗೆ ತಳ್ಳಲು ಹೊರಟಿದೆ ಎಂದು ಅವರು ದೂರಿದರು. ಎ. 20ರಿಂದ ಕೇಂದ್ರ ಸರಕಾರ ತಂಬಾಕು ನಿಷೇಧ ಮಾಡಲು ಹೊರಟಿದೆ. ಬೀಡಿ, ಸಿಗರೇಟ್ ಮೇಲೆ ಶೇ. 85ರಷ್ಟು ದೊಡ್ಡದಾಗಿ ಚಿತ್ರ ಮುದ್ರಿಸಬೇಕೆಂದು ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ತಂಬಾಕು ಉತ್ಪಾದನೆ ಸ್ಥಗಿತಗೊಂಡಿದೆ. ಇದನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇದಕ್ಕೆ ಕಾರಣ ಬಂಡವಾಳ ಶಾಹಿ ನೀತಿ ಕಾರಣವಾಗಿದೆ ಎಂದರು.
ರಾಜ್ಯದಲ್ಲಿ 10 ಲಕ್ಷ, ಜಿಲ್ಲೆಯಲ್ಲಿ 10 ಸಾವಿರ ಬೀಡಿ ಕಾರ್ಮಿಕರಿದ್ದಾರೆ. ಧೂಮಪಾನ ನಿಷೇಧದ ಹೆಸರಿನಲ್ಲಿ ಕೇಂದ್ರ ಸರಕಾರ ಹಲವು ಷರತ್ತು ಬೀಡಿ ಉದ್ಯಮದ ಮೇಲೆ ವಿಧಿಸುವ ಮೂಲಕ ಈ ಉದ್ಯಮವನ್ನೇ ನಂಬಿರುವ ಕಾರ್ಮಿಕರ ಹೊಟ್ಟೆ ಹೊಡೆಯಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮಂಗಳವಾರ ನ್ಯಾಯಯುತವಾಗಿ ನ್ಯಾಯ ಕೇಳಲು ಹೋದ ಮಹಿಳೆಯರ ಮೇಲೆ ಸರಕಾರ ವಿನಾಕಾರಣ ದಂಡಪ್ರಯೋಗ ಮಾಡಿರುವುದು ಸರಿಯಲ್ಲ ಎಂದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೀಡಿ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ತಂಬಾಕು ನಿಷೇಧ ಕಾಯ್ದೆ ಜಾರಿ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಖಂಡಿಸಿದರು. ಸರಕಾರ ಈ ಕೂಡಲೇ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹತ್ತು ಸಾವಿರ ಕಾರ್ಮಿಕರೊಂದಿಗೆ ದೊಡ್ಡ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ಬಿ. ಮುಮ್ತಾಝ್, ಉಪಾಧ್ಯಕ್ಷೆ ಬಿ. ಫೈರೂಝ್, ಅಷ್ಫಾಕ್ ಅಹ್ಮದ್, ನಝೀರ್ ಖಾನ್, ಉಬೇದುಲ್ಲಾ ಹಖಾನಿ, ಬಿ. ಜಮೀಲಾ, ರೇಷ್ಮಾಬಾನು ಮತ್ತಿತರರು ಉಪಸ್ಥಿತರಿದ್ದರು.