ವೌಲ್ಯಮಾಪನಕ್ಕೆ ಹಾಜರಾದ ಉಪನ್ಯಾಸಕರು
ಶಿವಮೊಗ್ಗ, ಎ. 20: ವೇತನ ಪರಿಷ್ಕರಣೆಗೆ ಆಗ್ರಹಿಸಿ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ವೌಲ್ಯಮಾಪನ ಬಹಿಷ್ಕರಿಸಿ ಉಪನ್ಯಾಸಕರು ನಡೆಸುತ್ತಿದ್ದ ಧರಣಿ ಹಿಂಪಡೆದಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗದ ಎರಡು ಕೇಂದ್ರಗಳಲ್ಲಿ ಬುಧವಾರ ಬೆಳಗ್ಗೆಯಿಂದ ವೌಲ್ಯಮಾಪನ ಕಾರ್ಯವು ವಿದ್ಯುಕ್ತವಾಗಿ ಆರಂಭಗೊಂಡಿದೆ. ಸುದ್ದಿಗಾರರೊಂದಿಗೆ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ (ಡಿಡಿಪಿಯು)ಯ ಉಪ ನಿರ್ದೇಶಕಿ ಛಾಯಾದೇವಿ ಮಾತನಾಡಿ, ಶಿವಮೊಗ್ಗ ನಗರದ ಡಿವಿಎಸ್ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜ್‌ಗಳಲ್ಲಿ ವೌಲ್ಯಮಾಪನ ಕೇಂದ್ರ ತೆರೆಯಲಾಗಿದೆ. ಡಿವಿಎಸ್ ಕಾಲೇಜ್‌ನಲ್ಲಿ ರಾಜ್ಯಶಾಸ್ತ್ರ ವಿಷಯ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಅರ್ಥಶಾಸ್ತ್ರ ವಿಷಯದ ಉತ್ತರ ಪತ್ರಿಕೆಯ ವೌಲ್ಯಮಾಪನಕ್ಕೆ ವ್ಯವಸ್ಥೆ ಮಾಡಲಾಗಿದೆ. ವೌಲ್ಯಮಾಪನ ಕಾರ್ಯಕ್ಕೆ ನಿಯೋಜಿತರಾದ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉತ್ತರ ಪತ್ರಿಕೆಗಳ ವೌಲ್ಯಮಾಪನ ಕಾರ್ಯ ನಡೆಸುತ್ತಿದ್ದಾರೆ. ವೌಲ್ಯಮಾಪನ ಕಾರ್ಯಕ್ಕೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಕೇಂದ್ರಗಳಲ್ಲಿ ಇಲಾಖೆಯ ವತಿಯಿಂದ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ವೌಲ್ಯಮಾಪನ ಕಾರ್ಯದ ಮೇಲುಸ್ತುವಾರಿಗೆ ಅಗತ್ಯ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ತಾವು ಕೂಡ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿಯಿತ್ತು ಪರಿಶೀಲನೆ ನಡೆಸುತ್ತಿದ್ದೇನೆ. ಯಾವುದೇ ಗೊಂದಲ, ಗಡಿಬಿಡಿಗೆ ಆಸ್ಪದವಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಛಾಯಾದೇವಿ ತಿಳಿಸಿದ್ದಾರೆ. 700 ಸಿಬ್ಬಂದಿ ನಿಯೋಜನೆ: ಎರಡು ಕೇಂದ್ರಗಳಲ್ಲಿ ಮೇಲುಸ್ತುವಾರಿ ಹಾಗೂ ವೌಲ್ಯಮಾಪನ ಕಾರ್ಯಕ್ಕಾಗಿ ಸುಮಾರು 700 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್) ಯ ಸಿಬ್ಬಂದಿ ಉತ್ತರ ಪತ್ರಿಕೆಗಳ ಕೋಡಿಂಗ್-ಡಿಕೋಡಿಂಗ್ ನಡೆಸಿ, ವೌಲ್ಯಮಾಪನ ಕಾರ್ಯಕ್ಕೆ ಉತ್ತರ ಪತ್ರಿಕೆಗಳನ್ನು ಸಜ್ಜುಗೊಳಿಸಿಟ್ಟಿದ್ದರು. ನಿರಾಳ ಭಾವ: ಉತ್ತರ ಪತ್ರಿಕೆ ವೌಲ್ಯಮಾಪನ ಕಾರ್ಯ ಶುರುವಾಗಿರುವುದಕ್ಕೆ ದ್ವಿತೀಯ ಪಿಯು ವಿದ್ಯಾರ್ಥಿ ಹಾಗೂ ಪೋಷಕ ವಲಯದಲ್ಲಿ ನಿರಾಳ ಭಾವ ಉಂಟು ಮಾಡಿದೆ. ಸರಕಾರ ಹಾಗೂ ಉಪನ್ಯಾಸಕರ ನಡುವಿನ ಹಗ್ಗಜಗ್ಗಾಟದಿಂದ ಕಳೆದ ಹಲವು ದಿನಗಳಿಂದ ಉತ್ತರ ಪತ್ರಿಕೆ ವೌಲ್ಯಮಾಪನ ಕಾರ್ಯ ಸ್ಥಗಿತಗೊಂಡಿತ್ತು. ಇದು ಸಹಜವಾಗಿಯೇ ತಮ್ಮಲ್ಲಿ ಆತಂಕ ಮೂಡಿಸಿತ್ತು. ಆದರೆ, ಇದೀಗ ವೌಲ್ಯಮಾಪನ ಕಾರ್ಯವನ್ನು ಉಪನ್ಯಾಸಕರು ಆರಂಭಿಸಿದ್ದಾರೆ. ಇದು ನಿಜಕ್ಕೂ ಸಂತಸಕರ ಸಂಗತಿಯಾಗಿದೆ. ಸಮರ್ಪಕವಾಗಿ ಉತ್ತರ ಪತ್ರಿಕೆಗಳ ವೌಲ್ಯಮಾಪನ ನಡೆಯಬೇಕು. ಹಾಗೆಯೇ ಕಾಲಮಿತಿಯೊಳಗೆ ಫಲಿತಾಂಶ ಪ್ರಕಟಿಸುವ ವ್ಯವಸ್ಥೆ ಮಾಡಬೇಕು ಎಂದು ದ್ವಿತೀಯ ಪಿಯು ವಿದ್ಯಾರ್ಥಿಯೋರ್ವ ತಿಳಿಸುತ್ತಾನೆ.