×
Ad

ವಕೀಲ ವೃತ್ತಿಯನ್ನು ಪ್ರಾಮಾಣಿಕತೆ, ಶ್ರದ್ಧೆಯಿಂದ ನಿರ್ವಹಿಸಿ: ಎನ್.ಕೆ.ಪಾಟೀಲ್

Update: 2016-04-20 22:13 IST

ಚಿಕ್ಕಮಗಳೂರು, ಎ.20: ವಕೀಲ ವೃತ್ತಿ ಎಂಬುದು ಗೌರವಾನ್ವಿತ ವೃತ್ತಿಯಾಗಿದ್ದು, ಅದನ್ನು ಪ್ರಾವಾಣಿಕತೆ, ಶ್ರದ್ಧೆ, ಮಾನವೀಯ ಮೌಲ್ಯಗಳೊಂದಿಗೆ ನಿರ್ವಹಿಸಿದರೆ ವೃತ್ತಿಯಲ್ಲಿ ಯಶಸ್ಸು ಸಾಧ್ಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಎನ್.ಕೆ.ಪಾಟೀಲ್ ತಿಳಿಸಿದರು.

ಅವರು ಬುಧವಾರ ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರ ಕಟ್ಟಡದ ಉದ್ಘಾಟನೆ ಮತ್ತು ಮಾದರಿ ನ್ಯಾಯಾಲಯದ ಕಟ್ಟಡ ಸಂಕೀರ್ಣ, ನ್ಯಾಯಾಧೀಶರ ವಸತಿ ಗೃಹಗಳು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ನ್ಯಾಯಾಲಯ ಸಂಕೀರ್ಣ ಸ್ಫೂರ್ತಿದಾಯಕ ವಾಗಿದ್ದರೆ ವಕೀಲರು ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಪ್ರೇರಣೆಯಾಗುತ್ತದೆ. ಕಿರಿಯ ವಕೀಲರು ಹಿರಿಯ ವಕೀಲರ ಮಾರ್ಗದರ್ಶನ ಪಡೆದು ಕಾರ್ಯ ನಿರ್ವಹಿಸಿದರೆ ವೃತ್ತಿಯಲ್ಲಿ ಯಶಸ್ವಿ ಕಾಣಬಹುದು. ಕಕ್ಷಿದಾರರಿಂದ ಬಂದ ಸ್ಟಾಂಪ್ ಹಣದಿಂದ ನ್ಯಾಯಾಂಗ ಇಲಾಖೆಯು ವಿವಿಧ ಅಭಿವೃದ್ಧಿ ಯೋಜನೆಗಳು ಸೇರಿದಂತೆ ನ್ಯಾಯಾಲಯದ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದು, ಅದನ್ನು ಕಾಪಾಡುವ ಜವಾಬ್ದಾರಿ ಹಿರಿಯ, ಕಿರಿಯ ವಕೀಲರ ಮೇಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಷಡಕ್ಷರಿಸ್ವಾಮಿ ಮಾತನಾಡಿ, ನ್ಯಾಯಾಂಗ ಇಲಾಖೆಯು ನಿರ್ಮಾಣ ಮಾಡಲು ಉದ್ದೇಶಿಸಿರುವ ಆಧುನಿಕ ವಿನ್ಯಾಸ ಹೊಂದಿರುವ, ಸುಸಜ್ಜಿತ ಮಾದರಿ ನ್ಯಾಯಾಲಯ ಸಂಕೀರ್ಣ ಚಿಕ್ಕಮಗಳೂರು ಜಿಲ್ಲೆಯ ದಾಖಲೆಯ ಪುಟಗಳಲ್ಲಿ ಮೈಲಿಗಲ್ಲು. ಜಿಲ್ಲೆಯು ಹಲವು ಸಮಸ್ಯೆಗಳ ಆಗರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್ ನಿಜಗಣ್ಣನವರ್ ಮತ್ತು ಕರ್ನಾಟಕ ರಾಜ್ಯ ವಕೀಲ ಪರಿಷತ್‌ನ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲೇ ಮಾದರಿ ಯಾದ ನ್ಯಾಯಾಲಯ ಕಟ್ಟಡ ಸಂಕೀರ್ಣ ನಿರ್ಮಾಣಗೊಳ್ಳಲಿದೆ ಎಂದರು.

ವೇದಿಕೆಯಲ್ಲಿ ವಕೀಲ ಸಂಘದ ಅಧ್ಯಕ್ಷ ಎಚ್.ಎಚ್.ಕೃಷ್ಣಮೂರ್ತಿ, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಕೆ.ವಿ.ರುದ್ರಪ್ಪ ಉಪಸ್ಥಿತರಿದ್ದರು.

ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ಎಚ್.ಎಸ್.ಕಮಲ ಸ್ವಾಗತಿಸಿ, ಕಾನೂನು ಸೇವೆ ಪ್ರಾಧಿಕಾರದ ವಕೀಲ ಸುಜೇಂದ್ರ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News