×
Ad

ಚಳವಳಿನಿರತ ಮಹಿಳೆಯರ ಮೇಲೆ ಪೊಲೀಸರ ಹಲ್ಲೆ: ಖಂಡನೆ

Update: 2016-04-20 22:14 IST

 ಚಿಕ್ಕಮಗಳೂರು, ಎ.20: ಕಳೆದೆರಡು ದಿನಗಳಿಂದ ಭವಿಷ್ಯ ನಿಧಿ ಕಾನೂನಿಗೆ ತಂದಿರುವ ತಿದ್ದುಪಡಿ ಹಿಂದೆಗೆಯಬೇಕೆಂದು ಹೋರಾಟ ನಡೆಸುತ್ತಿರುವ ಮಹಿಳೆಯರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ಚಿಕ್ಕಮಗಳೂರು ಜಿಲ್ಲೆಯ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಕೆ.ಎಂ.ಅಬ್ದುಲ್ ಜಬ್ಬಾರ್ ಹಾಗೂ ಐ.ಎನ್.ಟಿ.ಯು.ಸಿ ಮುಖಂಡ ಎಂ.ಸಿ.ಶಿವಾನಂದ ಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಈ ರಾದ್ಧಾಂತಕ್ಕೆಲ್ಲಾ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವೇ ನೇರ ಹೊಣೆ ಯಾಗಿದೆ. 1952ರ ಭವಿಷ್ಯ ನಿಧಿ ಕಾನೂನು ಈ ದೇಶದ ದುಡಿಯುವ ಜನರ ಭವಿಷ್ಯದ ಕಾನೂನಾಗಿ ರೂಪುಗೊಂಡಿದೆ. ದುಡಿಯುವ ಜನರಿಗೆ ನಿವೃತ್ತಿ ಕಾಲಕ್ಕೆ ಕೂಡಿಟ್ಟ ಹಣ ಸಿಗುವುದಲ್ಲದೆ, ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಮದುವೆ, ಕಾಯಿಲೆಗಳು ಹಾಗೂ ಮನೆ ನಿರ್ಮಾಣ ಮುಂತಾದ ಆವಶ್ಯಕತೆಗೆ ಅನುಗುಣವಾಗಿ ಭವಿಷ್ಯ ನಿಧಿಯ ಉಳಿತಾಯ ಮೊತ್ತದ ಶೇ.60 ಕ್ಕಿಂತ ಹೆಚ್ಚಿಲ್ಲದಂತೆ ಪಡೆಯಬಹುದಾಗಿತ್ತು. ನರೇಂದ್ರ ಮೋದಿಯ ಕೇಂದ್ರ ಸರಕಾರ ಈಗಾಗಲೇ ಭವಿಷ್ಯ ನಿಧಿ ಹಣಕ್ಕೆ ತೆರಿಗೆ ಹಾಕುವ ಪ್ರಸ್ತಾಪವನ್ನು ಈ ವರ್ಷದ ಮುಂಗಡ ಪತ್ರದಲ್ಲಿ ತಂದಿದ್ದು, ದುಡಿಯುವ ವರ್ಗದ ಜನರ ಒತ್ತಾಯವನ್ನು ಕೇಂದ್ರ ಸರಕಾರ ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.

ಕಾರ್ಮಿಕ ಸಂಘಟನೆಗಳ ಹಾಗೂ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ಪ್ರಸ್ತಾಪವನ್ನು ವಾಪಸ್ ತೆಗೆದುಕೊಂಡದ್ದು ಸ್ವಾಗತಾರ್ಹ. ಪುನಃ ಭವಿಷ್ಯ ನಿಧಿ ಮಾಲಕರ ಭಾಗದ ಹಣವನ್ನು ನಿವೃತ್ತಿಯಾಗುವವರೆಗೆ ಅಂದರೆ 58 ವರ್ಷದವರೆಗೆ ಪಡೆಯುವಂತಿಲ್ಲ ಎಂಬ ಕರಾಳ ತಿದ್ದುಪಡಿ ಮೂಲಕ ದುಡಿಯುವ ಜನರ ತುತ್ತಿನ ಬುತ್ತಿಗೆ ಕೇಂದ್ರ ಸರಕಾರ ಕೈ ಹಾಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಚಳವಳಿ ಮತ್ತು ಪೊಲೀಸರ ಹಲ್ಲೆಗೆ ಮೂಲ ಕಾರಣವಾಗಿದೆ. ಚಳವಳಿಯ ತೀವ್ರ ಸ್ವರೂಪವನ್ನು ಕಂಡ ಕೇಂದ್ರ ಸರಕಾರ ಆಗಸ್ಟ್ 2016ರವರೆಗೆ ಈ ತಿದ್ದುಪಡಿಯನ್ನು ಅಮಾನತಿನಲ್ಲಿ ಇಡುವುದಾಗಿ ಪ್ರಕಟಿಸುವ ಮೂಲಕ ಹೋರಾಟದ ತೀವ್ರತೆಯನ್ನು ತಗ್ಗಿಸುವ ತಂತ್ರ ಮಾಡಲು ಹೊರಟಿರುವುದು ಖಂಡನಾರ್ಹ ಎಂದು ದೂರಿದ್ದಾರೆ. ಕೂಡಲೆ ಕೇಂದ್ರ ಸರಕಾರವು ಭವಿಷ್ಯ ನಿಧಿ ಕಾನೂನಿಗೆ ತಂದಿರುವ ತಿದ್ದುಪಡಿಯನ್ನು ಗೊಂದಲ ಇಲ್ಲದೆ ಹಿಂದೆಗೆದುಕೊಳ್ಳಬೇಕೆಂದು ಜಿಲ್ಲೆಯ ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತವೆ. ಪೊಲೀಸರ ಹಲ್ಲೆಯನ್ನು ಖಂಡಿಸಿ ಹಾಗೂ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಎ.21ರಂದು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News