ಕಾರ್ಮಿಕರ ಮೇಲೆ ಲಾಠಿ ಚಾರ್ಜ್: ಸಿಪಿಎಂ ಖಂಡನೆ
ರಾಜ್ಯ ಸರಕಾರ ಕ್ಷಮೆಯಾಚಿಸಲು ಆಗ್ರಹ
ಬೆಂಗಳೂರು, ಎ.20: ಕೇಂದ್ರ ಸರಕಾರ ಜಾರಿ ಮಾಡಿದ್ದ ನೂತನ ಕಾರ್ಮಿಕ ಭವಿಷ್ಯ ನಿಧಿ ನೀತಿಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಮಾಡಿರುವ ಪೊಲೀಸ್ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ತೀವ್ರವಾಗಿ ಖಂಡಿಸಿದ್ದು, ಕೂಡಲೇ ಸರಕಾರ ಕಾರ್ಮಿಕರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ಕಾರ್ಮಿಕರು ತಾವು ದುಡಿದ ಹಣವನ್ನು ತಮ್ಮ ಆವಶ್ಯಕತೆಗನುಗುಣವಾಗಿ ಹಿಂಪಡೆಯಬಹದಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಪಿಎಫ್ ನೀತಿಯಿಂದ 58 ವರ್ಷಗಳು ಕಳೆಯುವವರೆಗೂ ತೆಗೆಯುವಂತಿಲ್ಲ ಎಂದು ತಿದ್ದುಪಡಿ ಮಾಡಲಾಗಿದೆ. ಕಾರ್ಮಿಕರ ಪಿಎಫ್ ಹಣ ವಾರ್ಷಿಕವಾಗಿ ನೂರಾರು ಕೋಟಿ ರೂಪಾಯಿ ಜಮಾ ಆಗುತ್ತದೆ. ಇದನ್ನು ಬಂಡವಾಳಶಾಹಿಗಳಿಗೆ ಮತ್ತು ಖಾಸಗಿಯವರಿಗೆ ನೀಡಲಿಕ್ಕಾಗಿ, ಅವರನ್ನು ಬೆಳೆಸಲಿಕ್ಕಾಗಿ ನರೇಂದ್ರ ಮೋದಿ ಸರಕಾರ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿದರು.
ದೇಶದಾದ್ಯಂತ ಗಾರ್ಮೆಂಟ್ಸ್‌ಗಳಲ್ಲಿ, ಕಂಪೆನಿಗಳಲ್ಲಿ ಬಹುತೇಕ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ಒಂದೇ ಕಡೆ ಹೆಚ್ಚು ದಿನಗಳ ಕಾಲ ಕೆಲಸ ಮಾಡುವುದಿಲ್ಲ. ಇದನ್ನು ಬಳಸಿಕೊಂಡು ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಇದರ ಭಾಗವಾಗಿ ಮಹಿಳಾ ಉದ್ಯೋಗಿಗಳ ನೂರಾರು ಕೋಟಿ ರೂ.ಗಳ ಪಿಎಫ್ ಹಣವನ್ನು ತಡೆಹಿಡಿಯಲಿಕ್ಕಾಗಿ ಹೊಸ ನೀತಿಯನ್ನು ಮಾಡಲಾಗಿದೆ ಹಾಗೂ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕೇಳದ ರೀತಿಯಲ್ಲಿ ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೇಂದ್ರ ಸರಕಾರ ರೂಪಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರಕಾರ ಕಾನೂನು ಪಾಲನೆ ಮಾಡುವ ನೆಪದಲ್ಲಿ ಮಹಿಳೆಯರೆನ್ನ್ನದೆ ಅವರ ಮೇಲೆ ಲಾಠಿಯನ್ನು ಬೀಸಲಾಗಿದೆ. ಎರಡು ದಿನದ ಪ್ರತಿಭಟನೆಯಲ್ಲಿ ಹೆಚ್ಚಾಗಿ ಮಹಿಳೆಯರು ಭಾಗವಹಿಸಿದ್ದರೂ ಯಾರೊಬ್ಬರನ್ನೂ ಮಹಿಳಾ ಪೊಲೀಸರನ್ನು ನೇಮಕ ಮಾಡಿಲ್ಲ. ಅಲ್ಲದೇ ಮಹಿಳೆಯರ ಮೇಲೆ ಪುರುಷರು ಪೊಲೀಸ್ ಲಾಠಿ ಬೀಸಿರುವುದು ಮಹಿಳಾ ವಿರೋಧಿಯಾಗಿದೆ. ಇದರ ಮೂಲಕ ಮಹಿಳೆಯರು ತಮ್ಮ ಹಕ್ಕುಗಳನ್ನು ಕೇಳದಂತೆ ಮಾಡುವ ಹುನ್ನಾರ ಮಾಡಲಾಗಿದ್ದು, ಇದು ಪ್ರಜಾಪ್ರಭುತ್ವ ವಿರೋಧಿ ನೀತಿ ಎಂದು ತಿಳಿಸಿದರು.
ನಗರದಲ್ಲಿ ನಡೆದ ಪ್ರತಿಭಟನೆ ಕುರಿತು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಪೂರ್ವ ಮಾಹಿತಿ ಇರಲಿಲ್ಲವೇ? ಅಥವಾ ಪೂರ್ವ ಮಾಹಿತಿಯಿದ್ದರೂ ಪ್ರತಿಭಟನಾಕಾರರನ್ನು ತಡೆಯಲು ಮುಂದಾಗಲು ಸರಕಾರಕ್ಕೆ ಸಾಧ್ಯವಾಗಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಕಾರ್ಮಿಕರ ಹೋರಾಟ ಹತ್ತಿಕ್ಕುವ ಹುನ್ನಾರ: ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಮಂತ್ರಿ ನೀಡಿರುವ ಹೇಳಿಕೆಯು ಕೇವಲ ಕಾರ್ಮಿಕರ ಹೋರಾಟವನ್ನು ಹತ್ತಿಕ್ಕಲು ಮಾಡಿರುವ ಹುನ್ನಾರವಾಗಿದೆ. ಈ ಕುರಿತು ಇದುವರೆಗೂ ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಿಲ್ಲ. ಆದುದರಿಂದ ಕೂಡಲೇ ಕೇಂದ್ರ ಸರಕಾರ ಅಧಿಕೃತ ಆದೇಶವನ್ನು ಹೊರಡಿಸಬೇಕು. ಗಾಯಗೊಂಡಿರುವ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ಶ್ರೀರಾಮರೆಡ್ಡಿ ಒತ್ತಾಯಿಸಿದರು.
ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್.ವರಲಕ್ಷ್ಮೀ ಮಾತನಾಡಿ, ಹತ್ತಾರು ವರ್ಷಗಳಿಂದ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿದ್ದ ಶೋಷಣೆ ಇದೀಗ ಹೊರಬಂದಿದೆ. ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಹೆಚ್ಚವರಿ ಕೆಲಸಗಳನ್ನು ವಹಿಸಲಾಗುತ್ತದೆ. ಇದನ್ನು ಮಾಡದೇ ಇದ್ದಂತಹ ಸಂದರ್ಭದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡಲಾಗುತ್ತದೆ. ಇವೆಲ್ಲವುಗಳನ್ನು ಸಹಿಸಿಕೊಂಡಿದ್ದ ಮಹಿಳೆಯರಿಂದು ಬೀದಿಗಿಳಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.