ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ: ಸಿಎಂ
ಬೆಂಗಳೂರು, ಎ.20: ಕೇಂದ್ರ ಸರಕಾರದ ನೂತನ ಪಿಎಫ್ ನೀತಿಯನ್ನು ವಿರೋಧಿಸಿ ಕಾರ್ಮಿಕರು ಮಂಗಳವಾರ ನಡೆಸಿದ ಪ್ರತಿಭಟನೆಯ ವರದಿಗಾರಿಕೆ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಪತ್ರಕರ್ತರ ನಿಯೋಗ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ತನಿಖೆಗೆ ಆದೇಶಿಸುತ್ತೇನೆ. ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾಗ ಪೊಲೀಸರು ಸಂಯಮ ಕಳೆದುಕೊಂಡು ಮಹಿಳೆಯರು, ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಸರಕಾರ ಕೂಡಲೇ ಹಲ್ಲೆಕೋರ ಪೊಲೀಸರ ವಿರುದ್ಧ ಕಾನೂನು ಕ್ರಮ ಜರಗಿಸುವ ಮೂಲಕ ಪ್ರಜಾಪ್ರಭುತ್ವದ ವೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಪತ್ರಕರ್ತರು ಒತ್ತಾಯಿಸಿದರು.
ಆನಂತರ, ವಿಕಾಸಸೌಧದಲ್ಲಿ ಪತ್ರಕರ್ತರ ನಿಯೋಗದ ಮನವಿಯನ್ನು ಸ್ವೀಕರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಉದ್ದೇಶಪೂರ್ವಕವಾಗಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದಂತಹ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನುಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗುರುಲಿಂಗಸ್ವಾಮಿ ಹೊಳಿಮಠ, ಉಪಾಧ್ಯಕ್ಷ ಶಂಕರ ಪಾಗೋಜಿ, ಆನಂದ ಬೈದನಮನೆ, ನವೀನ್ ಸೂರಿಂಜೆ, ಆರ್.ಟಿ. ವಿಠ್ಠಲಮೂರ್ತಿ, ಅನಿಲ್‌ಬಾಸೂರ್ ಸೇರಿದಂತೆ ಇನ್ನಿತರ ಪತ್ರಕರ್ತರು ಉಪಸ್ಥಿತರಿದ್ದರು.